ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೩೮
ಕದಳಿಯ ಕರ್ಪೂರ

ನೋಡಿ ಕೆಲವರು ಓಡಿಹೋದರೆ, ನೋಡಲು ಕೆಲವರು ಓಡಿ ಬಂದರು. ಇದಾವುದನ್ನೂ ನೋಡದೆ ಮಹಾದೇವಿ ಒಂದೇ ಸಮನೆ ನಡೆಯುತ್ತಿದ್ದಳು.
"ಯಾವ ಕಡೆ ? ಹೀಗೆ ಹೋಗುವುದು ಎಲ್ಲಿಗೆ ?"
ಆ ಒಂದು ಸಮಸ್ಯೆಯೇ, ನಡೆಯುತ್ತಿದ್ದಂತೆ ಅವಳ ಮನಸ್ಸಿನಲ್ಲಿ ಸುತ್ತುತ್ತಿತ್ತು. ಕ್ಷಣಕಾಲ ಅಷ್ಟೆ. ಮರುಕ್ಷಣವೇ ಮನಸ್ಸು ನಿರ್ಧರಿಸಿತು. ಇಷ್ಟಲಿಂಗದಲ್ಲಿ ಇಂದು ಮೂಡಿ ಕೈಬೀಸಿ ಕರೆದ ತೇಜಪುಂಜವಾದ ಮೂರ್ತಿ, ಕಲ್ಯಾಣದ ಅಣ್ಣನೇ ಎಂಬುದಾಗಿ ಭಾವಿಸಿದಳು. ಅವಳ ಗುರಿ ನಿಶ್ಚಿತವಾಯಿತು. ಆದರೆ ಕಾಲುಗಳು ಅಭ್ಯಾಸಬಲದಿಂದ ಗುರುಲಿಂಗದ ಮಠದತ್ತಲೇ ನಡೆಯುತ್ತಿದ್ದವು. `ಅದೂ ನಿಜ ! ಹೋಗುವ ಮೊದಲು, ಕೊನೆಯ ಬಾರಿ ಗುರುಗಳನ್ನು ಕಂಡು ಆಶೀರ್ವಾದವನ್ನು ಪಡೆದು ಹೋಗಬೇಕು' ಎಂದು ನಿರ್ಧರಿಸಿ ಅತ್ತ ನಡೆದಳು.
ಮಠದ ಕಡೆಗೆ ಬರುತ್ತಿರುವ ನಗ್ನವಿಗ್ರಹವನ್ನು ದೂರದಿಂದಲೇ ಮೊದಲು ಕಂಡವನು ಗುರುಪಾದಪ್ಪ. ಮಹಾದೇವಿಯಂತಿದೆ ಎಂದು ತೋರಿದರೂ ಕಣ್ಣುಗಳು ನಂಬಲಾರದೇ ಹೋದವು. ಆದರೆ ಸ್ವಲ್ಪ ಹತ್ತಿರ ಬಂದಂತೆ ನಂಬಲೇ ಬೇಕಾಯಿತು. ಕಾಂತಿಯಿಂದ ಹೊಳೆಯುತ್ತಿರುವ ದೇಹಕ್ಕೆ ದೃಷ್ಟಿ ತಾಗದಂತೆ ರಕ್ಷಿಸಲೆಂಬಂತೆ ಅವಳ ಕೇಶರಾಶಿಗಳು ದೇಹದ ಬಹುಭಾಗಕ್ಕೆ ಅರೆಮರೆಯ ತೆರೆಯನ್ನೆಳೆದಿದ್ದವು. ವೇಗವಾದ ಒಂದೇ ಗತಿಯಿಂದ ನಡೆದುಬರುತ್ತಿದ್ದಳು ಮಹಾದೇವಿ. ಗುರುಪಾದಪ್ಪ ಕಾತರತೆಯಿಂದ ಓಡಿದ ಗುರುಗಳ ಬಳಿಗೆ :
"ಗುರುಗಳೇ... ಗುರುಗಳೇ... ಬನ್ನಿ ಇಲ್ಲಿ, ಜಾಗ್ರತೆ ಬನ್ನಿ." ಅವನ ಧ್ವನಿಯಲ್ಲಿ ಕಾತರತೆಯನ್ನು ಗುರುತಿಸಿ ಗುರುಲಿಂಗರು ಆತುರದಿಂದಲೇ ಹೊರಬಂದರು. "ಅಲ್ಲಿ ನೋಡಿ, ಗುರುಗಳೇ, ನಮ್ಮ ಮಹಾದೇವಿಯಲ್ಲವೇ ?" "ಶಿವ ಶಿವಾ... ಏನಿದು ನಿನ್ನ ಲೀಲೆ ! ಎಂಬ ಉದ್ಗಾರ ಅವರಿಂದ ಹೊರಬಿತ್ತು. "ಹೌದು ಗುರುಪಾದಪ್ಪ, ಆಕೆ ಮಹಾದೇವಿ. ದೈವಸಂಕಲ್ಪ ತನ್ನ ಮಾರ್ಗವನ್ನು ಕಂಡು ಕೊಂಡಂತೆ ತೋರುತ್ತಿದೆ. ತಪೋವನದ ಮಂಟಪಕ್ಕೆ ನಾನು ಹೋಗುತ್ತೇನೆ. ಮಹಾದೇವಿಯನ್ನು ಅತ್ತ ಕಳುಹಿಸು ಎಂದು ನಾಲ್ಕು ಹೆಜ್ಜೆ ನಡೆದವರು, ಮತ್ತೆ ನಿಂತು ಹೇಳಿದರು :