ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬೆಳೆಯುವ ಬೆಳಕು
೧೩

ಅದರ ನೆತ್ತಿಯ ಮೇಲೆ ಬರುವ ವೇಳೆಗೆ ಎಲ್ಲರೂ ದಣಿದಿದ್ದರು.

"ಪರಿಷೆಯ ನಾಯಕನೊಬ್ಬ ಬಂದು ನನಗೆ ಹೇಳಿದ:

'ಸ್ವಾಮಿಗಳೇ, ಇಲ್ಲಿ ಸ್ವಲ್ಪ ವಿಶ್ರಮಿಸಿಕೊಳ್ಳೋಣ. ಇನ್ನು ಈ ಪರ್ವತವನ್ನು ಇಳಿದು, ಅದೋ, ಆ ಎದುರಿಗೆ ಕಾಣುವ 'ಪರ್ವತವನ್ನು ಹತ್ತಬೇಕು. ಅಲ್ಲಿಯೇ ಇಂದು ರಾತ್ರಿ ನಮ್ಮ ವಸತಿ.'

'ಅಂದರೆ! ಇದು ಶ್ರೀಶೈಲ ಅಲ್ಲ? ಇದೇ ಶ್ರೀಶೈಲಪರ್ವತ ಅಂದರಲ್ಲ ಯಾರೋ?" ನಾನು ಕೇಳಿದೆ.

'ಇಲ್ಲಿಂದ ಶ್ರೀಶೈಲಪರ್ವತ ಪ್ರಾರಂಭ. ಮಲ್ಲಿಕಾರ್ಜುನನ ದೇವಾಲಯಕ್ಕೆ ಹೋಗಬೇಕಾದರೆ ಇಂತಹ ಐದಾರು ಬೆಟ್ಟಗಳನ್ನು ಹತ್ತಿಳಿದು ಹೋಗಬೇಕು. ಎರಡು ಮೂರು ದಿನಗಳ ಪ್ರಯಾಣ ಅಲ್ಲಿಗೆ ಹೋಗುವುದಕ್ಕೆ' ಎಂದ ಆತ.

"ಇದೇ ಶ್ರೀಶೈಲವೆಂದು ಭಾವಿಸಿದುದಕ್ಕೆ ನನಗೆ ನಗು ಬಂದು ಶ್ರೀಶೈಲ ಇಷ್ಟು ಸುಲಭವೇ ಎಂದು ನನ್ನ ಮನಸ್ಸಿನ ಒಂದು ಮೂಲೆಯಲ್ಲಿ ಮೂಡಿದ್ದ ಅತೃಪ್ತಿ ಮಾಯವಾಯಿತು. ಸಾಹಸ ಹೆಚ್ಚಿದಷ್ಟೂ ಅದರಿಂದ ಬರುವ ಸಂತೋಷವೂ ಹೆಚ್ಚಲ್ಲವೇ! ಮುಂದಿನ ಕಷ್ಟಕರವಾದ ಮಾರ್ಗವನ್ನು ಎದುರಿಸಲು ನನ್ನ ಮನಸ್ಸು ಸಿದ್ಧವಾಯಿತು.

"ಸುತ್ತಲೂ ನೋಡಿದೆ. ನಾವು ರಾತ್ರಿ ತಂಗಬೇಕಾಗಿದ್ದ ಪರ್ವತಶಿಖರ ನಮ್ಮನ್ನು ಆದರಪೂರ್ವಕವಾಗಿ ಆಹ್ವಾನಿಸುವಂತಿತ್ತು. ಚಿಗುರಿನಿಂದ ಅಲಂಕೃತವಾಗಿ ನಿಂತಿದ್ದ ಮರಗಿಡಗಳೆಲ್ಲಾ ಸೂರ್ಯನ ಪ್ರಖರವಾದ ಬಿಸಿಲನ್ನು ತಾಳಲಾರದೆ ತಮ್ಮ ಹಸಿರು ತಲೆಯನ್ನು ಬಾಗಿಸಿ ಮೌನದಿಂದಿದ್ದುವು. ಪರಿಷೆಯ ಜನರೆಲ್ಲಾ ಚದುರಿ ಸಣ್ಣ ಗುಂಪುಗಳಾಗಿ ಒಂದೊಂದು ಮರದ ಕೆಳಗೆ ವಿಶ್ರಾಂತಿಯನ್ನು ಪಡೆಯುತ್ತಿದ್ದರು.

"ಆಯಾಸ ಸ್ವಲ್ಪ ಕಡಿಮೆಯಾದ ಮೇಲೆ ಮತ್ತೆ ಎಲ್ಲರೂ ಒಟ್ಟಾದರು. ಈ ವೇಳೆಗೆ ಹೊತ್ತು ಸ್ವಲ್ಪ ಇಳಿಮುಖವಾಗಿತ್ತು. ಮುಂದಿನ ಬೆಟ್ಟದ ಕಡೆಗೆ ಇಳಿಯತೊಡಗಿದವು.

"ಹೀಗೆ ಒಂದಾದಮೇಲೊಂದರಂತೆ ಐದಾರು ಬೆಟ್ಟಗಳನ್ನು ದಾಟಿಕೊಂಡು ಹೋಗಬೇಕು. ನನಗಂತೂ ಒಂದೊಂದು ಬೆಟ್ಟವನ್ನು ಹತ್ತಿ ಇಳಿದು ದಾಟಿದಾಗಲೂ ವಿಚಿತ್ರ ಅನುಭವವಾಗುತ್ತಿತ್ತು. ಯೋಗಿಗಳು ಇದನ್ನು ತಮ್ಮ ದೇಹಕ್ಕೆ ಹೋಲಿಸುವುದರ ಔಚಿತ್ಯ ಕ್ಷಣಕ್ಷಣಕ್ಕೂ ಹೆಚ್ಚುಹೆಚ್ಚಾಗಿ ಮನವರಿಕೆಯಾಗಿ ರೋಮಾಂಚನವನ್ನು ತರುತ್ತಿತ್ತು.