ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದಿಗಂಬರದ ದಿವ್ಯಾಂಬರೆ
೧೩೯


``ಗುರುಪಾದಪ್ಪ, ಮಹಾದೇವಿಯನ್ನು ಅತ್ತ ಕಳುಹಿಸು, ಆ ಕೋಣೆಯ ಮುಂಭಾಗದ ನಿಲುವಿನ ಮೇಲೆ, ಒಂದು ನಾರುಮಡಿಯಿದೆಯಲ್ಲ, ಅದನ್ನು ಆಮೇಲೆ ತೆಗೆದುಕೊಂಡು ಅಲ್ಲಿಗೆ ಬಾ ಎಂದು ಗುರುಲಿಂಗರು ತಪೋವನವನ್ನು ಪ್ರವೇಶಿಸಿದರು.

ಮಹಾದೇವಿ ಮಠದ ಆವರಣಕ್ಕೆ ಬರುತ್ತಿದ್ದಂತೆಯೇ ಗುರುಪಾದಪ್ಪ ಕಾಣಿಸಿಕೊಂಡು : ``ತಾಯಿ ಅಲ್ಲಿದ್ದಾರೆ ಗುರುಲಿಂಗರು ಎಂದು ತಪೋವನದತ್ತ ತೋರಿದ. ಮಹಾದೇವಿ ತಪೋವನವನ್ನು ಹೊಕ್ಕು, ಗುರುಗಳ ಬಳಿಗೆ ಬರುತ್ತಿದ್ದಂತೆಯೇ :

``ಇದೇನು ಮಗಳೇ ? ನಿನ್ನ ಈ ಲೀಲೆಯೂ ಶಿವನಿಗೆ ಬೇಕಾಯಿತೆ?

``ನಿಜ, ಗುರುಗಳೇ. ಆತನ ಸಂಕಲ್ಪದಂತೆಯೇ ಇದನ್ನು ನಾನು ಕೈಗೊಂಡಿದ್ದೇನೆ ಆವೇಶ ಎಷ್ಟೋ ಇಳಿದಿತ್ತು ಮಹಾದೇವಿಗೆ. ಆದರೆ ಆಯಾಸ ಇನ್ನೂ ಇತ್ತು.

``ಹೌದು, ತಾಯೀ. ಈ ನಿನ್ನ ವರ್ತನೆ, ಸತೀತ್ವದ ಮಹಾಶಕ್ತಿಯ ಸಂಕೇತವಾಯಿತು. ಹೆಣ್ಣು ಏರಬಲ್ಲ ವೈರಾಗ್ಯದ ಹಂತವನ್ನು ಏರಿ, ಮುಗಿಲು ಮುಟ್ಟಿತು ನಿನ್ನ ಸಾಧನೆ. ಈ ವೇಳೆಗೆ ಗುರುಪಾದಪ್ಪ, ಗುರುಗಳು ಹೇಳಿದ ನಾರುಬಟ್ಟೆಯನ್ನು ತಂದು ಅವರ ಕೈಗಿತ್ತ.

``ಈ ಲೀಲೆ ಇನ್ನು ಸಾಕು. ತೆಗೆದುಕೊ ನಾರುಮುಡಿಯನ್ನು ಅದನ್ನು ಕೊಡಹೋದರು ಗುರುಲಿಂಗರು.

``ಇಲ್ಲ, ಗುರುಗಳೇ. ಹೆಣ್ಣಿನ ದೇಹವನ್ನು ಕಾಮದ ದೃಷ್ಟಿಯಿಂದ ನೋಡುವ ಕಣ್ಣುಗಳು ಈ ಲೋಕದಲ್ಲಿ ಇರುವವರೆಗೂ ನಾನು ಬಟ್ಟೆಯನ್ನು ಧರಿಸುವುದಿಲ್ಲ- ಹೇಳಿದಳು ಮಹಾದೇವಿ.

``ಈ ಹುಚ್ಚು ಮಾತನ್ನು ಬಿಡು, ಮಹಾದೇವಿ. ಮೋಹದ ಕಣ್ಣುಗಳು ಇದ್ದರೆ ತಾನೇ, ಮೋಹವನ್ನು ಮೀರಿ ಮೇಲೇರುವ ಸಾಧನೆಗೆ ಬೆಲೆ ಇರುವುದು? ಅದು ಜಗತ್ತಿನ ನಿಯಮ. ಆ ಮಾತನ್ನು ಬಿಡು. ಜಗತ್ತು ಕಲ್ಪನೆಯಿಂದಲೂ ಕಾಣಲಾಗದ ಮಟ್ಟಕ್ಕೆ ಏರಿದೆ ನಿನ್ನ ವೈರಾಗ್ಯ. ಈ ಘಟನೆ, ನಿನ್ನ ಸಾಧನೆಯ ಜೀವನದಲ್ಲಿ ಒಂದು ಪರಿವರ್ತನೆಯ ಘಟ್ಟವಾಯಿತು. ಮುಂದೆ ನಿನ್ನ ವೈರಾಗ್ಯದ ವ್ಯಕ್ತಿತ್ವವನ್ನು ಚಿತ್ರಿಸಬೇಕಾದವರು ಈ ನಗ್ನರೂಪದ ಸಂಕೇತದಿಂದಲೇ ಚಿತ್ರಿಸಬೇಕಾಗುತ್ತದೆ. ಆದರೆ ಇಲ್ಲಿಗೆ ಅದು ಮುಗಿಯಬೇಕು. ಇನ್ನು ಈ ನಿನ್ನ