ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪೦
ಕದಳಿಯ ಕರ್ಪೂರ


ವೈರಾಗ್ಯ ಸಾಂಕೇತಿಕವಾಗಬೇಕು. ಲೌಕಿಕ ಋತಕ್ಕೆ ಒಳಪಟ್ಟು ಅದನ್ನು ಮೀರಿದಂತಿರಬೇಕು. ಆದುದರಿಂದ ತೆಗೆದುಕೋ ಈ ಬಟ್ಟೆಯನ್ನು.

``ಇಲ್ಲ ಗುರುಗಳೇ... ಒಮ್ಮೆ ಬಿಟ್ಟ ಈ ಮೋಹಪಾಶವನ್ನು ಮತ್ತೊಮ್ಮೆ ಕಟ್ಟಿಕೊಳ್ಳಲಾರೆ.

ಗುರುಗಳು ನಕ್ಕರು.

``ಇದೇಕೆ ಮಗಳೇ, ಮತ್ತೆ ನಿನಗೆ ಈ ಮರವೆ ? ಈ ಒಂದು ತುಂಡುಬಟ್ಟೆ ನಿನಗೆ ಮೋಹಪಾಶವಾಗುವುದಾದರೆ ಈ ಜಗತ್ತಿನ ಮಹಾಮೋಹವನ್ನು ಹೇಗೆ ಗೆಲ್ಲಬಲ್ಲೆ? - ಹೇಳುತ್ತಾ ಹೇಳುತ್ತಾ ಗುರುಗಳ ಧ್ವನಿ ಇನ್ನೂ ಗಂಭೀರವಾಯಿತು.

``ಆದುದರಿಂದ, ಕೇಳು ... ನಿನಗೆ ಯಾವುದೂ ಮೋಹವಾಗಬಾರದು. ಬಟ್ಟೆಯ ಮೋಹ ನಿನಗಿಲ್ಲ ನಿಜ. ಆದರೆ... ನಿನಗಾಗಿ ಬೇಡ, ಲೋಕಕ್ಕಾಗಿ ಧರಿಸು. ಈಗ ಈ ಕೂದಲನ್ನು ಏತಕ್ಕಾಗಿ ದೇಹಕ್ಕೆ ಮರೆಮಾಡಿಕೊಂಡಿರುವೆಯೋ, ಅದೇ ಕಾರಣಕ್ಕಾಗಿ, ಕೂದಲಿನಂತೆ ಇರುವ ಈ ತುಂಡುಬಟ್ಟೆಯನ್ನು ಮರೆಮಾಡಿಕೊ... `ನಾನು ಎಲ್ಲವನ್ನು ತ್ಯಜಿಸಿದವಳು'- ಎಂಬ ತ್ಯಾಗವೇ ಒಂದು ಮಾಯೆಯಾಗಿ ಕಾಡೀತು - ಅದಕ್ಕೆ ಆಸ್ಪದ ಕೊಡಬೇಡ.

ಮಹಾದೇವಿಯ ಅಂತರಂಗವನ್ನು ಆ ಮಾತು ಚುಚ್ಚಿ ಎಚ್ಚರಿಸಿತು. ಮರು ಮಾತನಾಡದೆ ಗುರುಗಳು ಕೊಟ್ಟ ನಾರುಬಟ್ಟೆಯನ್ನು ತೆಗೆದುಕೊಂಡು ಉಟ್ಟುಕೊಂಡಳು. ಲೌಕಿಕ ದೃಷ್ಟಿಯಿಂದಲೂ ತಕ್ಕಮಟ್ಟಿಗೆ ಗೌರವಾಸ್ಪದವಾದ ರೀತಿಯಲ್ಲಿ ಅದು ಅವಳ ದೇಹವನ್ನು ಮುಚ್ಚಲು ಸಮರ್ಥವಾಯಿತು.

ಈಗ ಒಂದು ರೀತಿಯ ಸಮಾಧಾನದಿಂದ ಹೇಳಿದ ಗುರುಗಳು :

``ಕುಳಿತುಕೋ, ಮಹಾದೇವಿ.

``ಇಲ್ಲ, ಗುರುಗಳೇ... ನಾನು ಇನ್ನು ಇಲ್ಲಿ ಇರಲಾರೆ... ತಾವು ಇಷ್ಟರ ಮಟ್ಟಿಗೆ ನನ್ನನ್ನು ರೂಪಿಸಿದ್ದೀರಿ. ಆದರೆ ಇಂದು ಅದಮ್ಯವಾದ ಆಕಾಂಕ್ಷೆ ನನ್ನಲ್ಲಿ ಮಹಾಪೂರದಂತೆ ಉಕ್ಕಿಬರುತ್ತಿದೆ. ಅತ್ತ ಹೋಗಲು ನನಗೆ ಅನುಮತಿ ಕೊಡಿ.

ಗುರುಗಳು ಕ್ಷಣಕಾಲ ಆಲೋಚನಾಮಗ್ನರಾಗಿ ಹೇಳಿದರು :

``ನಿಜ, ಮಗಳೆ. ನಿನ್ನನು ನಾನು ತಡೆಯಲಾರೆ. ಈ ಸಣ್ಣ ಆವರಣವನ್ನು ಮೀರಿ ಬೆಳೆಯಬೇಕಾದ ಮಹಾಚೇತನ ನೀನು ಎಂಬುದನ್ನು ಬಲ್ಲೆ. ನೀನು ಆ ನಿವಿಗೇರಿದಾಗ ನನ್ನನ್ನು ಸ್ಮರಿಸಿಕೋ ಮಗಳೇ. ನಿನ್ನ ಗುರುವಾಗುವ ಭಾಗ್ಯ ನನ್ನ ಪಾಲಿಗೆ ಬಂದುದಕ್ಕೆ ನಾನು ಧನ್ಯನಾಗಿದ್ದೇನೆ.