ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪೪
ಕದಳಿಯ ಕರ್ಪೂರ


``ಹಾಗೇನು?" ಲಿಂಗಮ್ಮನಿಂದ ಕೈಗಳನ್ನು ಬಿಡಿಸಿಕೊಳ್ಳುತ್ತಾ ಹೇಳಿದಳು ಮಹಾದೇವಿ : ಹಾಗಾದರೆ, ಹೋಗು ; ಚೆನ್ನಮಲ್ಲಿಕಾರ್ಜುನನ ಕರೆಯ ಮುಂದೆ, ನಿನ್ನ ತಾಯಿತನಕ್ಕೆ ನಾನು ಮಣಿಯಲಾರೆ. ನಿನ್ನ ತಾಯಿತನವನೊಲ್ಲೆ ಹೋಗು.

``ಅಯ್ಯೋ ಮಗಳೇ ! ಎಂದು ಕುಸಿದು ಕುಳಿತಳು ಲಿಂಗಮ್ಮ.

ಗುರುಗಳು ಮುಂದೆ ಮುಂದೆ ಬರುತ್ತಾ :

``ಲಿಂಗಮ್ಮ, ಇದುವರೆಗೂ ನಾನು ಹೇಳುತ್ತಾ ಬಂದುದೆಲ್ಲಾ ವ್ಯರ್ಥವಾಯಿತೆ? ಈಕೆ ನಿನ್ನ ಮಗಳೆಂಬ ವ್ಯರ್ಥವ್ಯಾಮೋಹವನ್ನು ಬಿಡು. ಮೊದಲಿನಿಂದಲೂ ನೀನು ಕಂಡ ಅಲೌಕಿಕ ಘಟನೆಗಳನ್ನು ಸ್ಮರಿಸಿಕೋ. ಮೂಡಿ ಮೇಲೇರುತ್ತಿರುವ ಸೂರ್ಯನನ್ನು ಪೂರ್ವದಿಕ್ಕು ತನ್ನ ಮಗನೆಂದು ಇಟ್ಟುಕೊಳ್ಳಲಾರದು. ಜಗತ್ತನ್ನೇ ಬೆಳಗುವ ಮಗಳನ್ನು ಹೆತ್ತು ಲೋಕಕ್ಕೆ ದಾನ ಮಾಡುತ್ತಿದ್ದೀಯ. ಆದುದದರಿಂದ ಲಿಂಗಮ್ಮ, ಓಂಕಾರ ನೀವಿಬ್ಬರೂ ಸಂತೋಷದಿಂದ ನಿಮ್ಮ ಮಗಳನ್ನು ಬೀಳ್ಕೊಡಿ. ತಂದೆತಾಯಿಗಳಿಗೆ ದುಃಖವನ್ನುಂಟುಮಾಡಿ ಹೋದೆನೆಂಬ ಅಳುಕು ಆಕೆಯ ಮನಸ್ಸಿನಲ್ಲಿ ಉಳಿಯುವುದು ಬೇಡ. ಹೂಂ.... ಮೇಲೇಳು, ಲಿಂಗಮ್ಮ.

ಲಿಂಗಮ್ಮ ಮುಗ್ಧಳಾದವಳಂತೆ ಎದ್ದುನಿಂತಳು. ಓಂಕಾರ ಮಗಳ ಸಮೀಪಕ್ಕೆ ಬಂದ. ಮಹಾದೇವಿ ಇಬ್ಬರಿಗೂ ನಮಸ್ಕರಿಸಿದಳು. ಇಬ್ಬರಿಗೂ ಕಂಠ ಬಿಗಿದು ಬಂದಿತು.

``ನಿನ್ನ ಸಾಧನೆಯಲ್ಲಿ ಯಶಸ್ಸನ್ನು ಪಡೆ ಮಗಳೇ. ನಿನ್ನ ಪತಿಯನ್ನು ಸೇರಿ, ಅವನೊಡನೆ ಸಾಮರಸ್ಯದ ಸುಖವನ್ನು ಪಡೆ. ಓಂಕಾರ ಹೇಗೋ ದುಃಖವನ್ನು ಅಡಗಿಸಿಕೊಂಡು ಗದ್ಗದಸ್ವರದಿಂದ ನುಡಿದ.

``ಹೋಗಿ ಬಾ ಮಗಳೇ ಎಂದಳು ಲಿಂಗಮ್ಮ ನಡುಗುವ ಧ್ವನಿಯಿಂದ. ಅಷ್ಟರಲ್ಲಿ ಧಾರಾಕಾರವಾಗಿ ಸುರಿಯತೊಡಗಿದ ಕಣ್ಣೀರು ಅವಳ ಮಾತನ್ನು ಮೂಕವನ್ನಾಗಿಸಿತು.

``ಧನ್ಯ ದಂಪತಿಗಳೇ ! ಇಂತಹ ಗಂಡನ ಮನೆಗೆ, ಹೀಗೆ ಮಗಳನ್ನು ಕಳುಹಿಸುವ ಪುಣ್ಯ ಯಾವ ದಂಪತಿಗಳಿಗಿದೆ ?

ಈ ವೇಳೆಗೆ ಹಿಂದೆ ನಿಂತಿದ್ದ ರಸವಂತಿ ಬಂದು ಮಹಾದೇವಿಯ ಪಾದಗಳ ಮೇಲೆ ಬಿದ್ದಳು. ಮಹಾದೇವಿ ಹಿಂದೆ ಸರಿಯುತ್ತಾ :

``ಯಾರು ? ರಸವಂತಿಯೇ ? ಎಂದು ಅವಳನ್ನು ಮೇಲಕ್ಕೆತ್ತಿದಳು. ರಸವಂತಿಯ ಕಣ್ಣುಗಳಿಂದಲೂ ನೀರು ಇಳಿಯುತ್ತಿದ್ದವು.

``ರಸವಂತಿ, ನೀನು ಹೇಗೆ ಬಂದೆ ? ಏಕೆ ಬಂದೆ ? ರಸವಂತಿ ?