``ಏಕೆ ಎಂದು ಕೇಳುತ್ತೀರಾ ಒಡತಿ ? ನಿಮ್ಮನ್ನು ಬಿಟ್ಟು ಹೇಗಿರಲಿ ಆ ಅರಮನೆಯಲ್ಲಿ ? ನೀವು ಬಂದ ನಾಲ್ಕು ದಿನಗಳಲ್ಲಿಯೇ ನನ್ನ ಜೀವನಕ್ಕೆ ಹೊಸದೊಂದು ದೃಷ್ಟಿಯನ್ನು ಕೊಟ್ಟಿರಿ. ನೀವು ನನ್ನ ಗುರು. ನಿಮ್ಮನ್ನು ನಾನು ಹಿಂಬಾಲಿಸುತ್ತೇನೆ.
ಅಲ್ಲಿದ್ದವರೆಲ್ಲಾ ಮಂತ್ರಮುಗ್ಧರಾದವರಂತೆ ನಿಂತು ಈ ದೃಶ್ಯವನ್ನು ನೋಡುತ್ತಾ ಕಣ್ಣೀರು ಮಿಡಿಯುತ್ತಿದ್ದರು. ಮಹಾದೇವಿ ಹೇಳಿದಳು :
``ನಿನ್ನ ಹೃದಯದ ಸಂಸ್ಕಾರ ದೊಡ್ಡದು ರಸವಂತಿ. ನೀನು ನನ್ನನ್ನು ಗುರು ಎಂದು ಭಾವಿಸಿದೆಯಲ್ಲವೇ ? ಹಾಗಾದರೆ ನಾನು ಹೇಳುವುದನ್ನು ಕೇಳು. ರಾಜರು ನನ್ನನ್ನು ಪ್ರೀತಿಸಿ ದುಃಖಕ್ಕೆ ಗುರಿಯಾದರು. ಅವರ ಜೀವನದಲ್ಲಿ ಶಾಂತಿ ಸಿಕ್ಕಲಿ - ಎಂದು ಪ್ರಾರ್ಥಿಸುತ್ತೇನೆ. ನೀನು ಅವರ ಬಳಿಯಲ್ಲಿದ್ದು, ಅವರ ಸೇವೆಯನ್ನು ಮಾಡುತ್ತಾ ಅವರನ್ನು ಸಮಾಧಾನಪಡಿಸು.
``ಇಲ್ಲ, ತಾಯಿ... ನಾನು ನಿಮ್ಮನ್ನೇ...
ಮಧ್ಯದಲ್ಲಿಯೇ ರಸವಂತಿಯ ಮಾತನ್ನು ತಡೆದು ಮಹಾದೇವಿ :
``ಇಲ್ಲಿ ಕೇಳು ರಸವಂತಿ, ನೀನು ನನ್ನನ್ನು ತುಂಬಾ ಪ್ರೀತಿಸಿದ್ದೀಯ. ನನ್ನ ಪ್ರೇಮವೂ ಅದಕ್ಕೆ ಕಡಿಮೆಯಿಲ್ಲವೆಂಬುದು ನನಗೆ ಗೊತ್ತು. ಆದರೆ ನಿನ್ನನ್ನು ಕರೆದುಕೊಂಡು ಹೋಗುವ ಅಧಿಕಾರ ನನಗಿಲ್ಲ. ನಿನಗೆ ನನ್ನ ಮೇಲೆ ಪ್ರೀತಿಗೌರವಗಳು ಇರುವುದೇ ನಿಜವಾದರೆ, ನಾನು ಹೇಳಿದ ಮಾತಿಗೆ ಪ್ರತಿಯಾಡದೆ ನಿನ್ನ ಕಾರ್ಯವನ್ನು ನಿರ್ವಹಿಸು. ಶಿವನಿಚ್ಛೆಯಿದ್ದರೆ ಮತ್ತೆ ನಿನ್ನನ್ನು ನೋಡುತ್ತೇನೆ.
ರಸವಂತಿ ನಿರುತ್ತರಳಾಗಿ ಕಣ್ಣೀರು ಸುರಿಸುತ್ತಾ ನಮಸ್ಕರಿಸಿದಳು.
ಮಹಾದೇವಿ ಹೊರಡಲು, ಸಿದ್ಧಳಾದಳು ; ಗುರುಗಳು ಹೇಳಿದರು :
``ಹೋಗಿ ಬಾ, ತಾಯಿ. ಹೆತ್ತ ಕುಲಕ್ಕೆ ಕೀರ್ತಿಯನ್ನು ತಾ. ನಿನ್ನ ಗುರುವಾಗುವ ಭಾಗ್ಯವನ್ನು ಪಡೆದ ಪುಣ್ಯಕ್ಕಾಗಿ ಆಗಾಗ ನನ್ನನ್ನು ಸ್ಮರಿಸಿಕೋ ಎನ್ನುತ್ತಾ ಅದುವರೆಗೆ ತಡೆದ ಕಂಬನಿಯನ್ನು ಅವರೂ ಮಿಡಿದರು. ಎಲ್ಲರ ಕಣ್ಣುಗಳಿಂದ ನೀರು ಇಳಿಯುತ್ತಿದ್ದವು.
ಮಹಾದೇವಿ ಎಲ್ಲರನ್ನೂ ಕೊನೆಯ ಬಾರಿ ನೋಡಿದಳು. ಎಲ್ಲರಿಗೂ ಕೈ ಜೋಡಿಸಿದಳು. ಅವಳ ಕಣ್ಣುಗಳಿಂದಲೂ ನೀರು ಇಳಿಯತೊಡಗಿದ್ದವು. ಮಂಜಾದ ಕಣ್ಣುಗಳಿಂದ ಮತ್ತೊಮ್ಮೆ ಗುರುಗಳನ್ನೂ, ತಂದೆ-ತಾಯಿಗಳನ್ನೂ ಎಲ್ಲರನ್ನೂ ನೋಡಿ ಕೈ ಜೋಡಿಸಿಕೊಂಡೇ ಮುಂದೆ ನಡೆಯತೊಡಗಿದಳು.