ಈ ಪುಟವನ್ನು ಪ್ರಕಟಿಸಲಾಗಿದೆ
೧೪೬
ಕದಳಿಯ ಕರ್ಪೂರ
ಎಲ್ಲರೂ ಅವಳನ್ನೇ ಹಿಂಬಾಲಿಸುತ್ತಿದ್ದರು. ತಪೋವನವನ್ನು ದಾಟಿದಳು ಮಹಾದೇವಿ. ತಪೋವನದಿಂದ ತಪೋಲಕ್ಷ್ಮಿಯೇ ರೂಪುಗೊಂಡು ನಡೆಯುತ್ತಿರುವಂತೆ ತೋರುತ್ತಿತ್ತು. ತಪೋಲಕ್ಷ್ಮಿಯನ್ನು ಹಿಂಬಾಲಿಸುವ ಪುಣ್ಯದುರುಳಿಗಳಂತೆ ಹಿಂಬಾಲಿಸುತ್ತಿದ್ದರು ಗುರುಗಳಾದಿಯಾಗಿ ಸರ್ವರೂ.
ಮಹಾದೇವಿ ಮಠದ ಆವರಣವನ್ನು ದಾಟಿದಳು. ಹಿಂದಿರುಗಿ ನೋಡಿದಳು. ಎಲ್ಲರೂ ತನ್ನ ಹಿಂದೆಯೇ ಬಂದಿದ್ದರು. ಮತ್ತೊಮ್ಮೆ ಕೊನೆಯ ಬಾರಿ ಅವರೆಲ್ಲರನ್ನೂ ನೋಡಿ :
``ನಾನಿನ್ನು ಬರುತ್ತೇನೆ. ನಿಮ್ಮೆಲ್ಲರ ಕರುಣೆಯ ಶಿಶುವಾಗಿ ಬಾಳುವಂತೆ ಹರಸಿರಿ. ಶರಣು ಶರಣಾರ್ಥಿ ಎಂದು ಕೈಮುಗಿದು, ಸರಕ್ಕನೆ ಮುಂದೆ ತಿರುಗಿ, ಕಣ್ಣೀರನ್ನು ಒರೆಸಿಕೊಳ್ಳುತ್ತಾ ನಡೆಯತೊಡಗಿದಳು. ಎಲ್ಲರೂ ಮಂಗಳದ ಮಿಂಚು ಹೊಡೆದವರಂತೆ ಮರವಟ್ಟು ನಿಂತು, ಆಕೆಯ ದಿವ್ಯ ಮೂರ್ತಿ ಮರೆಯಾಗುವವರೆಗೂ ನೋಡುತ್ತಿದ್ದರು.
●