ತಪೋಯಾತ್ರೆ
೧
ಪುರದ ಪುಣ್ಯವೇ ಹೆಣ್ಣು ರೂಪವನ್ನು ಧರಿಸಿ ಹೋಗುತ್ತಿರುವಂತೆ ಮಹಾದೇವಿ ಉಡುತಡಿಯಿಂದ ದೂರದೂರ ನಡೆಯುತ್ತಿದ್ದಳು. ಬಾಂಧವ್ಯದ ಕರೆ ಹೃದಯದಲ್ಲಿ ಆಗಾಗ ಮೊರೆಯುತ್ತಿದ್ದರೂ ಅದಕ್ಕೆ ಓಗೊಡದೆ ಆವೇಶಗೊಂಡವಳಂತೆ ವೇಗವಾಗಿ ನಡೆಯುತ್ತಿದ್ದಳು.
ಮೇಲೇರುತ್ತಿರುವ ಸೂರ್ಯನ ಪ್ರಖರವಾದ ಕಿರಣಗಳು, ತಮ್ಮ ಬಿಸಿಯನ್ನು ಬೀರುತ್ತಿದ್ದವು. ಕ್ರಮೇಣ ನೆಲವೂ ಕಾಯತೊಡಗಿತ್ತು. ರಸ್ತೆಯ ಪಕ್ಕದಲ್ಲಿನ ಸಾಲುಮರಗಳ ನೆರಳಿನಲ್ಲಿಯೇ ಆಶ್ರಯವನ್ನು ಪಡೆದು ನಡೆಯುತ್ತಿದ್ದಳು ಮಹಾದೇವಿ. ಕಷ್ಟವನ್ನು ಎಂದೂ ಕಂಡರಿಯದ ಅವಳ ದೇಹ ಆಗಲೇ ಅವಳ ಮಾತನ್ನು ಕೇಳುತ್ತಿರಲಿಲ್ಲ. ಆದರೂ ತನ್ನ ಆತ್ಮಶಕ್ತಿಯ ಸಂಕಲ್ಪದಿಂದ ಅದಕ್ಕೆ ಪ್ರಚೋದನೆಯನ್ನು ಕೊಟ್ಟು ಮುಂದೆ ಮುಂದೆ ನಡೆಯುತ್ತಿದ್ದಳು.
ಸ್ವಲ್ಪಕಾಲ ನಡೆಯುವಷ್ಟರಲ್ಲಿಯೇ ರಸ್ತೆಯ ಪಕ್ಕದಲ್ಲಿ ಒಂದು ಕಲ್ಲು ಗುಡ್ಡ ಕಣ್ಣಿಗೆ ಬಿದ್ದಿತು. ಒಂದೇ ಒಂದು ಅತಿದೊಡ್ಡ ಬಂಡೆಯಿಂದ ನಿರ್ಮಿತವಾದುದೆಂಬಂತೆ ಇದ್ದಿತು ಆ ಗುಡ್ಡ. ಅದನ್ನು ಕಂಡೊಡನೆಯೇ ಮಹಾದೇವಿಗೆ ತಾನಾಗಲೇ ಬಳ್ಳಿಗಾವೆಯ ಸಮೀಪಕ್ಕೆ ಬಂದಿರುವುದು ತಿಳಿಯಿತು. ಬಹಳ ಹಿಂದೊಮ್ಮೆ ತಾನು ಈ ಮಾರ್ಗವಾಗಿ ಬಂದಿದ್ದುದನ್ನು ನೆನೆಸಿಕೊಂಡಳು.
ಅಂದು ಬನವಾಸಿಯ ಮಧುಕೇಶ್ವರನ ಜಾತ್ರೆ. ಆ ವರ್ಷ ಉಡುತಡಿಯಿಂದ ಒಂದು ದೊಡ್ಡ ಗುಂಪೇ ಹೊರಟಿತ್ತು ಜಾತ್ರೆಗೆ. ಎಲ್ಲರೂ ಗಾಡಿ ಕಟ್ಟಿಕೊಂಡು ಹೊರಟಿದ್ದರು. ಸಾಲುಸಾಲು ಗಾಡಿಗಳ ಆ ಪ್ರಯಾಣ ಮಹಾದೇವಿಯ ಕಣ್ಣು ಮುಂದೆ ಸುಳಿಯಿತು. ಆ ಗುಡ್ಡದ ಬಳಿಗೆ ಬರುವ ವೇಳೆಗೆ ಬಿಸಿಲೇರಿದುದರಿಂದ ಪಕ್ಕದ ಮಾವಿನ ತೋಪಿನ ನೆರಳಿನಲ್ಲಿ ಗಾಡಿಗಳನ್ನು ಬಿಟ್ಟಿದ್ದರು. ಆಗ ತಾನು ಮತ್ತು ಶಂಕರಿ ಉರಿಯುವ ಆ ಬಿಸಿಲಿನಲ್ಲಿ ಗುಡ್ಡವನ್ನು ಹತ್ತಲು ಪ್ರಯತ್ನಿಸಿದ್ದು, ಬೇಡವೆಂದರೂ ಕೇಳದೆ ಅದನ್ನು ಹತ್ತಿ ದೊಡ್ಡವರಿಂದ ಗದರಿಸಿಕೊಂಡುದು - ಈ ಚಿತ್ರಗಳೆಲ್ಲಾ ಮಹಾದೇವಿಯ ಮನಸ್ಸಿನ ಮುಂದೆ ಸುಳಿದವು. ಮತ್ತೊಮ್ಮೆ ಆ