ಪುಟ:Kadaliya Karpoora.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮

ಕದಳಿಯ ಕರ್ಪೂರ

ಗುಡ್ಡವನ್ನು ಹತ್ತಬೇಕೆನ್ನಿಸಿತು. ಈಗಾಲೂ ಅದೇ ಉರಿಯುವ ಬಿಸಿಲು, ಗುಡ್ಡವೂ ಅಚಲವಾಗಿ ಹಾಗೇ ಮಲಗಿದೆ. ಆದರೆ ಜೊತೆಯಲ್ಲಿ ಶಂಕರಿಯಿಲ್ಲ. ಅಲ್ಲದೆ ಇಂದು ತಮ್ಮಿಬ್ಬರ ಜೀವನದಲ್ಲಿ ಎಂತಹ ಬದಲಾವಣೆ !

ಅದನ್ನು ಕುರಿತು ಆಲೋಚಿಸುತ್ತಿದ್ದಂತೆಯೇ, ಅವಳ ಮನಸ್ಸಿನಲ್ಲಿ, ಸುಖವೋ ದುಃಖವೋ ಸಂತೋಷವೋ ವಿಷಾದವೋ - ಯಾವುದೋ ಅರಿಯಲಾಗದ ಭಾವವೊಂದು ತುಂಬಿ ಮನಸ್ಸು ಭಾರವಾಯಿತು. ಗುಡ್ಡವನ್ನೇರುವ ಕಾಲುಗಳು ಇನ್ನೂ ಭಾರವಾದುವು. ಆದರೂ ಹುಚ್ಚಳಂತೆ ಅದನ್ನು ಹತ್ತಿದಳು. ಊರಿನತ್ತ ದೃಷ್ಟಿಯನ್ನು ಪಸರಿಸಿದಳು. ತನ್ನ ಜೀವನದ ಚಿತ್ರಪಟಗಳೆಲ್ಲಾ ಅವಳ ಮನಃಪಟಲದ ಮೇಲೆ ಸುರುಳಿಯನ್ನು ಬಿಚ್ಚಿದುವು. ಕಣ್ಣು ಮಂಜಾದವು.

ಆದರೆ ಮರುಕ್ಷಣದಲ್ಲಿಯೇ ಅದಮ್ಯವಾದ ಆಧ್ಯಾತ್ಮಿಕ ಆಕಾಂಕ್ಷೆ ಅಂತರಾಳದಿಂದ ಚಿಮ್ಮಿತು. ಉಡುತಡಿಯತ್ತಣಿಂದ ಕಣ್ಣುಗಳು, ಕಲ್ಯಾಣವಿರಬಹುದೆಂದು ತಾನು ಭಾವಿಸಿದ ಉತ್ತರ ದಿಕ್ಕಿನ ಕಡೆಗೆ ಹರಿದುವು. ಅನತಿ ದೂರದಲ್ಲಿದ್ದ ತನ್ನ ಊರಿನಿಂದ ಹಾರಿ, ಅತಿ ದೂರದಲ್ಲಿದ್ದ ಕಲ್ಯಾಣದ ಚಿತ್ರವನ್ನು ಮನಸ್ಸು ಕಾಣಲು ಯತ್ನಿಸಿತು. ಕಲ್ಯಾಣದ ಅಣ್ಣ, ಕೈಬೀಸಿ ಕರೆದಂತಾಯಿತು. ಕಣ್ಣುಗಳು ತೇಜಃಪುಂಜವಾದುವು. ತನ್ನ ಮನಸ್ಸಿನ ದೌರ್ಬಲ್ಯವನ್ನು ಕಂಡು ನಾಚಿದಳು. ದಡದಡನೆ ಕೆಳಗಿಳಿಯತೊಡಗಿದಳು ಗುಡ್ಡದಿಂದ.

ಗುಡ್ಡವನ್ನಿಳಿದು ಸ್ವಲ್ಪಕಾಲ ಮುಂದೆ ನಡೆಯುವಷ್ಟರಲ್ಲಿ ಬಳ್ಳಿಗಾವೆಯ ಮುಂದಿರುವ ಶಿವದೇವಾಲಯದ ಶಿಖರ ಕಣ್ಣಿಗೆ ಬಿದ್ದಿತು. ಅದನ್ನು ಸಮೀಪಿಸಿದಂತೆಲ್ಲಾ ಆ ದೇವಾಲಯದ ಮುಂದೆ ಹಬ್ಬಿ ಹರಡಿರುವ ತಾವರೆ ಕೆರೆಯೂ ಗೋಚರಿಸಿತು. ಆ ಕೆರೆಯ ಏರಿಯ ಮೇಲೆ ನಡೆಯುತ್ತಿರುವ ಮಹಾದೇವಿಯ ಮನಸ್ಸಿನ ಮುಂದೆ ಅಲ್ಲಮಪ್ರಭುದೇವನ ವ್ಯಕ್ತಿತ್ವ ಸುಳಿಯತೊಡಗಿತ್ತು.

ಅಲ್ಲಮನನ್ನು ಲೋಕಕ್ಕೆ ಕೊಟ್ಟ ಊರು ಈ ಬಳ್ಳಿಗಾವೆ. ಪ್ರಭುದೇವನ ಪಾದಗಳ ಸ್ಪರ್ಶದಿಂದ ಈ ಕೆರೆಯ ಏರಿ ಪವಿತ್ರವಾಗಿದೆಯಲ್ಲವೇ ! ಅವನ ದರ್ಶನದಿಂದ ಈ ನೀರು ತೀರ್ಥವಾಗಿರಬೇಕು. ಈ ಕಲ್ಲು, ಪರುಷಮಣಿ ಯಾಗಿರಬೇಕು. ಅವನು ನಡೆದು ಪವಿತ್ರವಾದ ಮಾರ್ಗದಲ್ಲಿ ತಾನು ನಡೆಯುತ್ತಿರುವೆನೆಂಬುದನ್ನು ನೆನೆಸಿಕೊಂಡು ಮಹಾದೇವಿಯ ಮನಸ್ಸು ಆನಂದದಿಂದ ಪುಳಕಿತವಾಯಿತು.