ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪
ಕದಳಿಯ ಕರ್ಪೂರ

"ಹೀಗೆ ದೇಹದ ಪಂಚಕೋಶಗಳನ್ನು ದಾಟಿಕೊಂಡು ಮುನ್ನಡೆಯುವ ಸಾಧಕನಂತೆ, ಐದು ಬೆಟ್ಟಗಳನ್ನು ಏರಿ ಇಳಿದು, ಮುಂದೆ ನಡೆಯುತ್ತಿರುವಾಗ ಕಣ್ಣಿಗೆ ಬಿದ್ದಿತು ಶಿಖರೇಶ್ವರ. ಮಲ್ಲಿಕಾರ್ಜುನನಿಗೆ ಅದು ಇನ್ನೊಂದು ಹೆಸರೇನೋ ಎಂದು ತಿಳಿದಿದ್ದೆ. ಆದರೆ ಅದಲ್ಲ, ಮಲ್ಲಿಕಾರ್ಜುನ ಶಿಖರದ ಮೇಲಿಲ್ಲ. ಶಿಖರೇಶ್ವರದಿಂದ ಮತ್ತೆ ಇಳಿಯಬೇಕು. ಹಾಗೆ ಸ್ವಲ್ಪ ದೂರ ಇಳಿದು ಹೋದಮೇಲೆ ಮಟ್ಟಸವಾದ ಒಂದು ಬಟ್ಟಬಯಲಿನ ಪ್ರದೇಶ ಸಿಕ್ಕುತ್ತದೆ. ಶ್ರೀಶೈಲ ವಿರಾಟ್ ಪುರುಷನಿಗೆ ಹೃದಯಗಹ್ವರದಂತಿರುವ ಈ ಪ್ರದೇಶದ ಕೊನೆಯಲ್ಲಿದೆ ಮಲ್ಲಿಕಾರ್ಜುನನ ದೇವಾಲಯ. ಅದರ ಸುತ್ತಲೂ ಪರ್ವತಗಳು ತಲೆಯೆತ್ತಿ ಗಿರಿಮಲ್ಲಯ್ಯನಿಗೆ ಭವ್ಯತೆಯ ತೋರಣವನ್ನು ಕಟ್ಟಿನಿಂತಿವೆ. ಅಲ್ಲಿ ಹೋಗಿ ನಿಂತರೆ ಸಾಕು, ಇಷ್ಟೆಲ್ಲಾ ನಾವು ಪಟ್ಟ ಶ್ರಮ ಸಾರ್ಥಕವೆನಿಸುತ್ತದೆ.
"ದೇವಾಲಯದ ಮಹಾದ್ವಾರದಿಂದ ನೇರವಾಗಿ ಸ್ವಲ್ಪ ದೂರ ಹೋಗಿ ಎಡಕ್ಕೆ ತಿರುಗಿದರೆ ಪಾತಾಳಗಂಗೆಗೆ ಹೋಗುವ ದಾರಿ ಸಿಕ್ಕುತ್ತದೆ."
ತದೇಕಚಿತ್ತಳಾಗಿ ಶ್ರೀಶೈಲದ ಚಿತ್ರವನ್ನು ಕಣ್ಣಿನ ಮುಂದೆ ಚಿತ್ರಿಸಿಕೊಳ್ಳುತ್ತಾ ಕೇಳುತ್ತಿದ್ದ ಮಹಾದೇವಿ ಇಲ್ಲಿ ಗುರುಗಳನ್ನು ತಡೆದಳು.
"ಪಾತಾಳಗಂಗೆ! ಹಾಗೆಂದರೇನು ಗುರುಗಳೇ?"
"ಅದೇ? ಎರಡು ಪರ್ವತಗಳ ಆಳವಾದ ಕಂದರದಲ್ಲಿ ಕೃಷ್ಣಾನದಿ ಹರಿದು ಬರುತ್ತದೆ. ತನ್ನ ಸಲಿಲದೇಹದಿಂದ ಕನ್ನಡನಾಡಿನಲ್ಲಿ ಜಲಜಲನೆ ಉಕ್ಕಿಬಂದ ಕೃಷ್ಣೆ, ಶ್ರೀಶೈಲಪರ್ವತಗಳ ಆಳವಾದ ಕಣಿವೆಯನ್ನು ಹೊಕ್ಕು ಮಲ್ಲಿಕಾರ್ಜುನನ ಪಾದವನ್ನು ತೊಳೆಯುವ ಪಾತಾಳಗಂಗೆಯಾಗಿ ಪರಿಣಮಿಸಿದ್ದಾಳೆ. ದೇವಾಲಯದ ಬಳಿಯಿಂದ ಪರ್ವತವನ್ನಿಳಿಯುವಾಗ ಅದನ್ನು ನೋಡಿದರೆ, ಎಲ್ಲಿಯೋ ಪಾತಾಳದಲ್ಲಿ ಹರಿಯುತ್ತಿರುವಂತೆ ತೋರುತ್ತದೆ. ಇಳಿಯುತ್ತಾ ಹೋದಂತೆಲ್ಲಾ ಶಿವನ ಪಾದವನ್ನು ಅರಸಲು ವಿಷ್ಣು ಪಾತಾಳವನ್ನು ಹೊಕ್ಕನಂತಲ್ಲ, ಹಾಗಾಗುತ್ತದೆ ನಮ್ಮ ಸ್ಥಿತಿಯೂ, ಅಲ್ಲಿ ಮಲ್ಲಿಕಾರ್ಜುನನ ಪಾದಗಳನ್ನು ಬಿಟ್ಟು ಅಗಲಲಾರೆನೆಂಬಂತೆ ಗಂಭೀರಳಾಗಿ ನಿಂತುಬಿಟ್ಟಿದ್ದಾಳೆ ಕೃಷ್ಣೆ.

"ಆಹಾ! ಎಷ್ಟು ಸುಂದರವಾದ ಪ್ರದೇಶ ಅದು! ಸುತ್ತಲೂ ಎತ್ತರವಾಗಿ ನಿಂತಿರುವ ಪರ್ವತದ ಬೃಹದ್ದೇಹಗಳು ನಮ್ಮ ಆತ್ಮಕ್ಕೆ ವಜ್ರರಕ್ಷಣೆಯನ್ನಿತ್ತಂತೆ ಕಂಗೊಳಿಸುತ್ತವೆ. ಸುಪ್ರಭಾತವನ್ನೆದುರುಗೊಳ್ಳಲು ಸಂಭ್ರಮದಿಂದ ಕುಕಿಲಿರಿಯುತ್ತಿರುವ ಬಗೆಬಗೆಯ ಹಕ್ಕಿಗಳ ಮಧುರಗಾನ, ಮಂಗಳದ ಒಸಗೆಯನ್ನು ಕಿವಿಯಲ್ಲಿ ಬೀರುತ್ತದೆ. ಪಾತಾಳಗಂಗೆಯಲ್ಲಿ ಮಿಂದು, ಎತ್ತರವಾದ