ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಪೋಯಾತ್ರೆ
೧೪೯


ಆ ವೇಳೆಗೆ ಕೆರೆಯ ಏರಿಯನ್ನು ದಾಟಿಕೊಂಡು ಅದರ ಇನ್ನೊಂದು ಕೊನೆಗೆ ಬಂದಿದ್ದಳು. ಅಲ್ಲಿಯೇ ಇದ್ದುದು ಶಿವಾಲಯ. ಅನತಿದೂರದಲ್ಲಿಯೇ ಬಳ್ಳಿಗಾವೆ ಕಣ್ಣಿಗೆ ಗೋಚರಿಸುತ್ತಿತ್ತು. ಊರಿನ ಕಲಕಲನಿನಾದವೂ ಅಸ್ಪಷ್ಟವಾಗಿ ಕಿವಿಗೆ ಬೀಳುತ್ತಿತ್ತು.

ದೇವಾಲಯದ ಮುಂಭಾಗದಲ್ಲಿಯೇ ಕೆರೆಗೆ ಇಳಿಯಲು ಮೆಟ್ಟಿಲುಗಳಿದ್ದುವು. ಮಹಾದೇವಿ, ಮೆಟ್ಟಲುಗಳನ್ನು ಇಳಿದು ಮುಖವನ್ನು ತೊಳೆದುಕೊಂಡು, ಹರಕರುಣೆಯ ತೀರ್ಥಜಲದಂತಿದ್ದ ಆ ನೀರನ್ನು ಕುಡಿದಳು. ದಣಿದ ದೇಹಕ್ಕೆ ಸ್ವಲ್ಪ ನೆಮ್ಮದಿ ದೊರಕಿದಂತಾಯಿತು. ಮೇಲಕ್ಕೆ ಹತ್ತಿ ಬಂದು ಶಿವಾಲಯವನ್ನು ಪ್ರವೇಶಿಸಿದಳು.

ಬೆಳಗಿನ ಪೂಜೆಯಾಗಲೇ ಮುಗಿದು ಬಹಳ ಹೊತ್ತಾಗಿದ್ದರೂ ಗರ್ಭಗೃಹದಲ್ಲಿದ್ದ ನಂದಾದೀಪ ಸಣ್ಣಗೆ ಉರಿಯುತ್ತಿತ್ತು. ಅದರ ಮಂದ ಪ್ರಕಾಶದಲ್ಲಿ. ಅಚ್ಚ ಕಪ್ಪು ಶಿಲೆಯ ಶಿವಲಿಂಗ ಭವ್ಯವಾಗಿ ಹೊಳೆಯುತ್ತಿತ್ತು. ನಿರಂತರ ಚಲನೆಯುಳ್ಳ ಈ ಜಗತ್ತಿನಲ್ಲಿ ಅಚಲವಾದ ಸತ್ಯದ ಸಾಕ್ಷಾತ್ಕಾರಕ್ಕೆ ಸಾಕ್ಷೀಭೂತವಾದ ಸನಾತನಶಕ್ತಿಯಂತೆ ಕಂಗೊಳಿಸುತ್ತಿತ್ತು ಶಿವನ ರೂಪ. ಅದನ್ನೇ ದಿಟ್ಟಿಸಿ ನೋಡುತ್ತಾ ನೋಡುತ್ತಾ ಮಹಾದೇವಿಯ ಮನಸ್ಸು ಭಾವಪರವಶವಾಯಿತು. ಆ ಜಗತ್ಪತಿಯ ಎದುರಿನಲ್ಲಿ ಕುಸಿದು ಕುಳಿತಳು. ಹೊರಗೆ ಕಾಣುವ ದಿವ್ಯ ರೂಪವನ್ನೇ ಅಂತರಂಗದಲ್ಲಿಯೂ ಕಾಣುವವಳಂತೆ ಕಣ್ಣುಗಳನ್ನು ಮುಚ್ಚಿ ಕ್ಷಣಕಾಲ ಧ್ಯಾನಾಸಕ್ತಳಾದಳು.

ಅಪೂರ್ವವಾದ ಚೈತನ್ಯಶಕ್ತಿಯೊಂದು ಆವಿರ್ಭವಿಸಿ ಅವಳ ದೇಹವನ್ನು ವ್ಯಾಪಿಸಿದಂತಾಯಿತು. ಹಿಂದೊಮ್ಮೆ ಪ್ರಭುದೇವ ಇಂಥದೇ ತಳಮಳದಿಂದ ತನ್ನೆದುರು ಬಂದು ಮೊರೆಯಿಟ್ಟಾಗ, ಅವನನ್ನು ಹಿಡಿದು ಉದ್ಧರಿಸಿದ ಆ ಶಕ್ತಿಯೇ ಇಂದು ಮಹಾದೇವಿಯನ್ನು ಮೇಲೆತ್ತಿತು. ಅದೂ ಇನ್ನೂ ಹೆಚ್ಚು ಹತ್ತಿರವಾದ ಶಕ್ತಿಯಾಗಿ ಇಳಿದುಬಂದಿತು. ತನ್ನ ಪತಿಯೇ ಬಂದು ತನ್ನನ್ನು ತಬ್ಬಿದಂತಾಯಿತು ಶರಣೆ ಸತಿ ಮಹಾದೇವಿಗೆ.

ಆ ಅಲೌಕಿಕ ಅನುಭವವನ್ನು ಕಂಡು ಕಣ್ದೆರೆದಳು. ಏನನ್ನೂ ಅರಿಯದಂತೆ ಶಿವಲಿಂಗ ಗಂಭೀರವಾಗಿ ನಗುತ್ತಿತ್ತು. ಆತನ ಹರಕೆಯನ್ನು ಪಡೆದು ಮೇಲೆದ್ದು ಹಿಂದಿರುಗಿದಾಗ ಬೃಹದಾಕಾರದ ವೃಷಭದೇವ ಕಣ್ಣಿಗೆ ಬಿದ್ದ. ಜಗತ್ತನ್ನೇ ಹೊತ್ತಿರುವ ಶಿವನನ್ನು ಹೊತ್ತವನು ತಾನು ಎಂದು ತನ್ನ ವಿರಾಟ್ ರೂಪವನ್ನು ಸೂಚಿಸುವ ಸಂಕೇತದಂತಿತ್ತು, ಶಿವಲಿಂಗದ ಮುಂದಿದ್ದ ಬಸವಣ್ಣನ ಆ ಬೃಹದ್ರೂಪ.