ಮಹಾದೇವಿ ಮಾತನ್ನು ಮುಗಿಸಿದ ಮೇಲೆ ಗಾಡಿಯಲ್ಲಿ ಸ್ವಲ್ಪ ಕಾಲ ಮೌನವಾವರಿಸಿತು. ಕಲ್ಲುದಾರಿಯಲ್ಲಿ ನಡೆಯುತ್ತಿದ್ದ ಗಾಡಿಯ ಧಡಕಿಗೆ ಅತ್ತ ಇತ್ತ ಅಲ್ಲಾಡುತ್ತಿದ್ದ ಅವರ ದೇಹದಂತೆಯೇ ಮನಸ್ಸೂ ತತ್ತರಿಸತೊಡಗಿತ್ತು ! ಕೊನೆಯಲ್ಲಿ ಶಿವಯ್ಯನವರೇ ಹೇಳಿದರು :
``ಎಂತಹ ಸಾಹಸವನ್ನು ಮಾಡಿದ್ದೀಯ ತಾಯಿ. ಇದನ್ನು ಸಾಮಾನ್ಯ ಜನ ಹೇಗೆ ಊಹಿಸಬಲ್ಲರು !
``ಊಹಿಸುವುದಿರಲಿ, ಹೇಳಿದರೆ ನಂಬುವುದೂ ಕಷ್ಟ ; ಅಂತಹ ಕೆಲಸವನ್ನು ಮಾಡಿದ್ದೀಯಮ್ಮ - ನುಡಿದಳು ಶಿವಮ್ಮ.
ಇದುವರೆಗೂ ಮೌನವಾಗಿದ್ದ ರುದ್ರಮುನಿ ಗಂಭೀರವಾಗಿ ಹೇಳಿದ :
``ಸಾಹಸವೇ ನಿಜ. ಆದರೆ ನಿಮ್ಮ ಈ ಭಾವನೆಯನ್ನು, ಅಂದರೆ ಮದುವೆಯಾಗಲೇಬಾರದೆಂಬ ಈ ಮಾತನ್ನು, ಧರ್ಮದಲ್ಲಿ ಎಲ್ಲಿಯೂ ಹೇಳುವುದಿಲ್ಲವಲ್ಲ - ತನ್ನ ಅನುಮಾನವನ್ನು ವ್ಯಕ್ತಪಡಿಸಿದ.
``ನನ್ನ ಅಭಿಪ್ರಾಯವನ್ನು ತಪ್ಪಾಗಿ ತಿಳಿದಿರಿ - ಮಹಾದೇವಿ ಹೇಳಿದಳು.
``ಸಾಧಕರು ಮದುವೆಯಾಗಲೇಬಾರದೆಂದು ನಾನಾದರೂ ಎಲ್ಲಿ ಹೇಳಿದೆ? ಹೆಣ್ಣಾಗಲೀ ಗಂಡಾಗಲೀ ಮದುವೆಯಾಗಿಯೂ ಮಹೋನ್ನತವಾದುದನ್ನು ಸಾಧಿಸಬಹುದು. ಕಲ್ಯಾಣದಲ್ಲಿ ಅನೇಕ ಶರಣೆಯರು ಮದುವೆಯಾಗಿದ್ದುಕೊಂಡೇ ತಮ್ಮ ಸಾಧನೆಯಲ್ಲಿ ತೊಡಗಿದ್ದಾರೆಂದು ಕೇಳಿದ್ದೇನೆ. ನೀವಿಬ್ಬರೂ ಈಗ ಕೈಗೊಂಡಿರುವ ಗೃಹಸ್ಥಜೀವನ ಅತಿಪವಿತ್ರವಾದುದೆಂದು ನಾನು ಮೆಚ್ಚಿದ್ದೇನೆ. ಆದರೆ ನನಗೆ ಈ ರೀತಿಯ ಜೀವನ ಬೇಕಿಲ್ಲ ಎಂದು ಹೇಳಿದೆ, ಅಷ್ಟೆ.
``ಆದರೆ ಇಂತಹ ತೀವ್ರತರವಾದ ವೈರಾಗ್ಯ ಹೆಣ್ಣಿಗೆ ಅಸಹಜವೆಂದು ಕಾಣುತ್ತದೆಯಲ್ಲ ತಾಯಿ ! ಶಿವಯ್ಯನವರು ಮುಂದುವರಿಸಿದರು : ``ಪುರುಷರು ಇಂತಹ ವೈರಾಗ್ಯವನ್ನು ಕೈಕೊಂಡು ನಡೆದುದನ್ನು ನಾವು ಇತಿಹಾಸ ಪುರಾಣಗಳಲ್ಲಿ ಕೇಳಿದ್ದುಂಟು. ಆದರೆ ಮಾತೃಹೃದಯವೇ ಪ್ರಧಾನವಾದ ಹೆಣ್ಣಿಗೆ ಇದು ಸಹಜವೇ ಎನ್ನಿಸುತ್ತದೆ.
``ನಿಮ್ಮ ಅನುಮಾನವೂ ನಿಜವಾದುದೇ. ಆದರೆ ತಾನು ಹೆತ್ತ ಮಗವನ್ನು ಪ್ರೀತಿಸುವುದು ಮಾತ್ರವೇ ಮಾತೃಹೃದಯವೆನಿಸುತ್ತದೆಯೇ ? ಜಗತ್ತನ್ನೇ ತನ್ನ ಮಾತೃಹೃದಯದ ವಾತ್ಸಲ್ಯದಲ್ಲಿಟ್ಟುಕೊಳ್ಳುವ ಮಹಾಮಾತೆಯೂ ಆಕೆ ಆಗಲಾರಳೆಂಬುದನ್ನು ನಾನು ಒಪ್ಪಲಾರೆ. ಅಂತಹ ಮಾತೆಯಾಗಬೇಕೆಂದು ನಾನು ಹಂಬಲಿಸುತ್ತಿದ್ದೇನೆ. ಆ ಜಗತ್ಪಿತನನ್ನೇ ಪತಿಯಾಗಿ ಪಡೆಯಲು