ಪುಟ:Kadaliya Karpoora.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮

ಕದಳಿಯ ಕರ್ಪೂರ

ಕಾತರಗೊಂಡಿದ್ದೇನೆ. ಆವೇಶಗೊಂಡಂತೆ ಹೇಳಿದಳು ಮಹಾದೇವಿ.

``ಕ್ಷಮಿಸಬೇಕು - ರುದ್ರಮುನಿ ಮತ್ತೆ ಹೇಳಿದ : ``ಜಗತ್ಪಿತನೇ ನಮ್ಮ ಪತಿ ಎಂಬ ಮಾತಿನ ಅರ್ಥವನ್ನು ಸರಿಯಾಗಿ ಅರಿಯದೆ, ಕೇವಲ ಈ ಆವೇಶದಿಂದ ನೀವು ಮನೆಯನ್ನು ಬಿಟ್ಟುದು ಸರಿಯಾಗಲಿಲ್ಲ. ಜೀವನವನ್ನೆಲ್ಲವನ್ನೂ ಆವೇಶದಿಂದಲೇ ಕಳೆಯುವುದು ಸಾಧ್ಯವೇ? ಜಗತ್ತು ಅಷ್ಟು ಸರಳವಾಗಿಲ್ಲ.

ಮಹಾದೇವಿಗೆ ಮಾತು ಚುಚ್ಚಿದಂತಾಯಿತು. ಆದರೂ ಆತನ ನೇರವಾದ, ಸರಳವಾದ, ಲೌಕಿಕ ಸಮ್ಮತವಾದ ಅಭಿಪ್ರಾಯಕ್ಕೆ ಮೆಚ್ಚಿದಳು.

``ಕ್ಷಮಿಸಬೇಕು ಅಣ್ಣ ! ಜಗತ್ತು ನನ್ನ ವರ್ತನೆಯನ್ನು ಹೇಗೆ ಅರ್ಥಮಾಡಿಕೊಳ್ಳುತ್ತದೆಯೋ ಹೇಳಲಾರೆ. ಆದರೆ ಕೇವಲ ತಾತ್ಕಾಲಿಕವಾದ ಆವೇಶದಿಂದ ಮಾತ್ರ ನಾನು ಈ ನಿರ್ಧಾರವನ್ನು ಕೈಗೊಂಡಿಲ್ಲ. ನನ್ನ ರಕ್ತದ ಕಣಕಣದಲ್ಲಿಯೂ ಈ ವೈರಾಗ್ಯದ ಭಾವನೆ ಮಿಡಿಯುತ್ತಿರುವುದನ್ನು ಸಾಧ್ಯವಿದ್ದರೆ ಬಗಿದು ತೋರಿಸುತ್ತಿದ್ದೆ. ಆಳವಾಗಿ ಆಲೋಚಸಿ ನನ್ನ ಜೀವನದ ಗುರಿಯನ್ನು ನಿರ್ಧರಿಸಿಕೊಂಡು ಕಲ್ಯಾಣದತ್ತ ನಡೆಯುತ್ತಿದ್ದೇನೆ. ಇಷ್ಟಾದರೂ ಜಗತ್ತು, ನನ್ನ ವೈರಾಗ್ಯ ಅಸಹಜವೆಂದೇ ಹೇಳುವುದಾದರೇ ನಾಮದಲಿ ನಾನು ಹೆಂಗಸು, ಭಾವಿಸಲು ಗುಂಡುರೂಪು ನೋಡಾ -' ಎಂದು ಹೇಳಬೇಕಾಗುತ್ತದೆ. ಅವಳ ಮಾತನ್ನು ಕೇಳುತ್ತಾ ಕೇಳುತ್ತಾ ರುದ್ರಮುನಿ ವಿಸ್ಮಿತನಾದರೂ ಮತ್ತೆ ಕೇಳಿದ :

``ಆದರೂ ಜನ ಏನು ಹೇಳುತ್ತಾರೆ ಗೊತ್ತೆ ? ಮಹಾದೇವಿ ಕೌಶಿಕನನ್ನು ಮದುವೆಯಾದಳು ; ಸಂಸಾರವನ್ನು ಮಾಡಿದಳು. ಅನಂತರ ಗಂಡನನ್ನು ಬಿಟ್ಟು ಕಲ್ಯಾಣಕ್ಕೆ ಹೊರಟಳು ಎಂದು ಹೇಳುವುದಿಲ್ಲವೇ ? ಈಗ ಸುದ್ದಿ ಹಾಗೇ ಹರಡುತ್ತಿದೆಯಲ್ಲ !

ಮಹಾದೇವಿ ನಕ್ಕಳು. ಮತ್ತೆ ಕ್ಷಣಕಾಲ ಆಲೋಚಿಸಿ ಹೇಳಿದಳು : ``ನಿಜ ಅದು ಜಗತ್ತಿನ ತಪ್ಪಲ್ಲ. ತಮ್ಮ ತಮ್ಮ ಮಟ್ಟಕ್ಕೆ ಜನ ಆಲೋಚನೆ ಮಾಡುವುದು ಸಹಜವೇ. ಆದರೆ ಅದನ್ನು ಕುರಿತು ನಾನೇಕೆ ಯೋಚಿಸಲಿ ? ನನ್ನ ವೈರಾಗ್ಯದ ಕೀರ್ತಿ ಜಗತ್ತಿಗೆಲ್ಲಾ ಹರಡಬೇಕೆಂದೇನೂ ನಾನು ಹೊರಟಿಲ್ಲ. ಅದು ಅನಿವಾರ್ಯವಾದುದರಿಂದ ನಾನು ಹಾಗೆ ಹೊರಟುಬರಬೇಕಾಯಿತು. ಇಲ್ಲವಾದರೆ ಇನ್ನಾರ ಕಣ್ಣಿಗೂ ಬೀಳದಂತೆ ಸಾಧನೆಯನ್ನು ಮಾಡುತ್ತಿದ್ದವಳು ನಾನು. ನನ್ನ ಸಾಧನೆಯ ಮಾರ್ಗಕ್ಕೆ ಈ ಒಂದು ಮದುವೆಯ ಸುಳ್ಳು ತೆರೆ ಬಂದು ಮುಚ್ಚಿ, ಆಡಂಬರದಿಂದ ಅದನ್ನು ಪಾರುಮಾಡಿದರೆ ನಾನು ಅದಕ್ಕೆ ಸಂತೋಷವನ್ನೇ