ಶಿಲಾಪೀಠದ ಮೇಲೆ ಧ್ಯಾನಸ್ಥನಾಗಿದ್ದು, ಬೆಟ್ಟಗಳ ಮರೆಯಲ್ಲಿ ಮೇಲೇರಿ ಬರುತ್ತಿರುವ ಬಾಲಸೂರ್ಯನ ಕಿರಣಗಳ ಹಿತಕರವಾದ ಬಿಸಿಯನ್ನು ಅನುಭವಿಸಿ, ಕ್ರಮೇಣ ಧ್ಯಾನದಿಂದ ಕಣ್ದೆರೆದು ಲಿಂಗಪೂಜೆಯನ್ನು ಮಾಡುವ ಸುಖದ ಮುಂದೆ ಪ್ರಪಂಚದ ಸುಖವೆಲ್ಲಾ ತೃಣವಾಗಿ ಕಾಣಿಸುತ್ತದೆ.
"ಅಲ್ಲಿಂದ ಮೇಲೇರತೊಡಗಿದರೆ, ಅನುಭವಿಗಳ ಅನುಸಂಧಾನದಿಂದ ಆತ್ಮಸಾಕ್ಷಾತ್ಕಾರದ ಕೈಲಾಸವನ್ನೇರುತ್ತಿರುವಂತೆ ಭಾಸವಾಗುತ್ತದೆ. ಅದು ಕಷ್ಟಕರವಾದುದೂ ಹೌದು. ಆದರೂ ಆ ಶ್ರಮದ ಗರ್ಭದಲ್ಲಿಯೇ ಸಂತೋಷದ ಸಂಜೀವಿನಿ ಹುದುಗಿ, ಬೆವರು ಸುರಿಯುತ್ತದೆ. ಜೊತೆಗೆ ತಂಗಾಳಿಯೂ ಬೀಸುತ್ತದೆ. ಹೀಗೆ ಮೇಲೇರಿ ಬರುವಾಗ ದೂರದಲ್ಲಿ ಶಿಖರೇಶ್ವರನ ದರ್ಶನ ಮೊಟ್ಟಮೊದಲು ನಮಗಾಗುತ್ತದೆ. ಶಿಖರೇಶ್ವರನಿಗೆರಗಿ, ಅದರಿಂದ ಉತ್ಸಾಹಿತರಾಗಿ ಮತ್ತೆ ಮೇಲೇರತೊಡಗುತ್ತೇವೆ. ಇನ್ನೇನು ಹೆಜ್ಜೆಯನ್ನಿಡುವುದೇ ಸಾಧ್ಯವಿಲ್ಲ ಎನ್ನುವ ವೇಳೆಗೆ ಮಲ್ಲಿಕಾರ್ಜುನನ ಮಹಾದ್ವಾರ ಗೋಚರಿಸುತ್ತದೆ. ಜ್ಯೋತಿರ್ಲಿಂಗಕ್ಕೆ ದೃಷ್ಟಿಯನ್ನಿಡುತ್ತೇವೆ. ನಿತ್ಯವೂ ಹೀಗೆ ಪಾತಾಳಗಂಗೆಯಲ್ಲಿ ಮಿಂದು, ಪ್ರೀತಿಯಿಂದ ಶಿಖರೇಶ್ವರನಿಗೆರಗಿ, ಜ್ಯೋತಿರ್ಲಿಂಗಕ್ಕೆ ದೃಷ್ಟಿಯನ್ನಿಟ್ಟರೆ ಅದಕ್ಕೆ ಎಣೆ ಯಾವುದು? ಅವನ ದೇಹ ವಜ್ರದೇಹವಾಗುತ್ತದೆ; ಮನಸ್ಸು ಮಹಾದೇವನಾಗುತ್ತದೆ."
ತಾವೀಗ ಶ್ರೀಶೈಲದಲ್ಲಿಯೇ ಇದ್ದು ಅನುಭವಿಸುತ್ತಿರುವಂತಹ ತಲ್ಲೀನತೆಯಿಂದ ಹೇಳುತ್ತಿದ್ದರು ಗುರುಗಳು. ಕೇಳುತ್ತಿದ್ದವರು ಕೂಡ ನಾಲ್ಕು ಗೋಡೆಗಳ ಮರೆಯಿಂದ ಹಾರಿಹೋಗಿ ಪಾತಾಳಗಂಗೆಯಲ್ಲಿ ಮಿಂದು ಮೇಲೇರುತ್ತಿದ್ದರು. ಕ್ಷಣಕಾಲ ಮಲ್ಲಿಕಾರ್ಜುನನ ಚೈತನ್ಯವೇ ಮನೆಯನ್ನೆಲ್ಲಾ ಆವರಿಸಿದಂತೆ ಮೌನವಾಗಿತ್ತು. ಮತ್ತೆ ಗುರುಗಳೇ ಮೌನವನ್ನು ಮುರಿದರು:
"ಎಷ್ಟು ದಿನಗಳಿದ್ದರೂ ಅಲ್ಲಿಂದ ಬಿಟ್ಟು ಬರುವುದಕ್ಕೇ ಮನಸ್ಸಾಗುವುದಿಲ್ಲ."
"ನೀವು ಅಲ್ಲಿ ಎಷ್ಟು ದಿನಗಳು ಇದ್ದಿರಿ, ಗುರುಗಳೇ?” ಓಂಕಾರ ಕೇಳಿದ.
"ನಾನು ಅಲ್ಲಿ ಸುಮಾರು ಒಂದು ತಿಂಗಳಿದ್ದೆ. ಸುತ್ತಲಿನ ಸ್ಥಳಗಳನ್ನೆಲ್ಲಾ ಪರಿಶೀಲಿಸಿದೆವು. ಅದರಲ್ಲಿ ಮುಖ್ಯವಾಗಿ ನನ್ನ ಗಮನ ಸೆಳೆದ ಇನ್ನೊಂದು ದೃಶ್ಯವೆಂದರೆ ಅರ್ಕೇಶ್ವರನ ಹಿಂದೆ ಪಂಚಧಾರೆ ಸುರಿಯುತ್ತದೆ. ಅಂದರೆ ಆ ಕಲ್ಲುಗುಡ್ಡದಿಂದ ನೀರು ಚಿಮ್ಮಿ ಹರಿಯುತ್ತದೆ. ಐದು ಕಡೆಗಳಲ್ಲಿ ಹೀಗೆ ನೀರು ಉಕ್ಕುತ್ತದೆ. ಅಲ್ಲಿನ ಪದರಪದರಗಳಲ್ಲಿ ಶೋಧಿಸಿಬಂದ ತಿಳಿನೀರು ಅಮೃತಧಾರೆಯಂತೆ ಕಾಣುತ್ತದೆ. ಅದರ ಮುಂದೆ ಆಳವಾದ ಕಣಿವೆ. ಅಲ್ಲೆಲ್ಲಾ ಬಹುದೀರ್ಘವಾದ ಮತ್ತು ದಟ್ಟವಾದ ಹಸುರಿನಿಂದ ಕಂಗೊಳಿಸುವ ಮರಗಿಡಗಳು.