ಪುಟ:Kadaliya Karpoora.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಪೋಯಾತ್ರೆ

೧೫೯

ಪಡುತ್ತೇನೆ. ಜನ ಏನೇ ಹೇಳಿಕೊಳ್ಳಲಿ, ನಾನು ಕೌಶಿಕನ ಮನೆಗೆ ಹೋದುದೇಕೆಂದು, ಮತ್ತು ಅಲ್ಲಿ ನಡೆದುದೇನೆಂದು, ನನಗೆ ಗೊತ್ತು, ನನ್ನ ಚೆನ್ನಮಲ್ಲಿಕಾರ್ಜುನನಿಗೆ ಗೊತ್ತು ; ಅಷ್ಟು ಸಾಕು ನನಗೆ.

ರುದ್ರಮುನಿಯ ಬಾಯಿ ಕಟ್ಟಿತು. ಅವನ ಮನಸ್ಸು ಗೌರವಪೂರ್ಣವಾಯಿತು.

ಇಂತಹ ಅಪೂರ್ವವಾದ ವ್ಯಕ್ತಿಗೆ ಸ್ವಲ್ಪವಾದರೂ ಸಹಾಯ ಮಾಡುವ ಅವಕಾಶ ಸಿಕ್ಕಿದುದಕ್ಕಾಗಿ ಅವರೆಲ್ಲರಿಗೂ ಒಂದು ಬಗೆಯ ಹೆಮ್ಮೆಯಾದಂತಾಯಿತು.

ಮಾತಿನ ಭರದಲ್ಲಿ ದಾರಿ ಸಾಗುತ್ತಿದ್ದುದೇ ತಿಳಿಯುತ್ತಿರಲಿಲ್ಲ.

ಪುಣ್ಯವ್ಯಕ್ತಿಯನ್ನು ಹೊತ್ತು, ಆ ಸಂಭ್ರಮದ ಸಂತೋಷದಿಂದಲೋ ಎಂಬಂತೆ ಎತ್ತು ತಮ್ಮ ಕೊರಳ ಕಿಂಕಿಣಿಗಳನ್ನು ಕುಣಿಸುತ್ತಾ ನಡೆಯುತ್ತಿದ್ದುವು. ರಾತ್ರಿಯಾಗುವ ವೇಳೆಗೆ ಕುಂತಳಾಪುರವನ್ನು ತಲುಪಿದರು.

ವಿಸ್ತಾರವಾದ ಒಳಾಂಗಣವನ್ನುಳ್ಳ ದೊಡ್ಡ ಮಹಡಿಯ ಮನೆ ಶಿವಯ್ಯನವರದು. ಅತ್ಯಂತ ಶ್ರೀಮಂತರಲ್ಲದಿದ್ದರೂ ನೆಮ್ಮದಿಯಾಗಿ ಬಾಳುತ್ತಿದ್ದವರೆಂಬುದು ಮೇಲು ನೋಟಕ್ಕೆ ಕಾಣುವಂತಿತ್ತು ಮನೆಯ ಏರ್ಪಾಡು. ಅಂದು ರಾತ್ರಿ ಮಹಾದೇವಿಗೆ ಅತ್ಯಂತ ಆದರದ ಉಪಚಾರ ನಡೆಯಿತು. ಗಂಡನೆದುರಿಗೆ ಮಾತನಾಡಲು ಸಂಕೋಚಗೊಂಡು ಸುಮ್ಮನೆ ಕುಳಿತಿದ್ದ ಅಪರ್ಣೆ, ಈಗ ಮಹಾದೇವಿಯನ್ನು ಗೌರವಪೂರ್ಣವಾದ ಪ್ರೇಮದಿಂದ ಮಾತನಾಡಿಸಿದಳು. ಸ್ವಲ್ಪ ಹೊತ್ತಿನಲ್ಲಿಯೇ ಅವರು ಬಹುದಿನದ ಗೆಳತಿಯರಂತಾದರು. ಅಪರ್ಣೆಯ ಮುಗ್ಧಮನಸ್ಸನ್ನು ಕಂಡು ಮಹಾದೇವಿ ಮೆಚ್ಚಿದಳು.

ರಾತ್ರಿ ಬಹುಬೇಗ ಕಳೆದು ಬೆಳಗಾಯಿತು. ಮಹಾದೇವಿ ತನ್ನ ಮುಂದಿನ ಪಯಣವನ್ನು ಕೈಗೊಳ್ಳಲು ಸಿದ್ಧಳಾದಳು. ತಾನು ಬೆಳಗ್ಗೆಯೇ ಹೊರಡಬೇಕೆಂಬುದನ್ನು ಹಿಂದಿನರಾತ್ರಿಯೇ ಹೇಳಿದಾಗ, ಆ ವಿಚಾರವಾಗಿ ಆಗಲೇ ಸ್ವಲ್ಪ ಚರ್ಚೆ ನಡೆದಿತ್ತು.

``ಎಲ್ಲಿಯಾದರೂ ಉಂಟೇ? ಒಂದೆರಡು ದಿನ ಇದ್ದು ಹೊರಡಬೇಕು ಅಪರ್ಣೆ ಹೇಳಿದ್ದಳು.

``ಹೌದಮ್ಮ, ಮಹಾದೇವಿ. ನಾಳೆ ಒಂದು ದಿನವಾದರೂ ಇದ್ದೇ ಇರಬೇಕು- ಶಿವಮ್ಮ ಒತ್ತಾಯಪಡಿಸಿದ್ದಳು ವಾತ್ಸಲ್ಯದಿಂದ.

``ನಿಮ್ಮ ವಿಶ್ವಾಸವನ್ನು ನಾನು ಹೇಗೆತಾನೆ ಮರೆಯಲಿ. ಆದರೆ ಕ್ಷಮಿಸಿರಿ, ನಾನು ಇರುವುದು... ಇದು ಸಾಧ್ಯವೇ ಇಲ್ಲದ ಮಾತು. ತಾವು ಇದಕ್ಕೆ ಬೇಸರಪಟ್ಟುಕೊಳ್ಳದೆ ನನ್ನನ್ನು ಕಳುಹಿಸಿಕೊಡಬೇಕು. ಈ ಉಪಚಾರವನ್ನು ಕೂಡ,