ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೬೦
ಕದಳಿಯ ಕರ್ಪೂರ


ನಿಮ್ಮ ಮನಸ್ಸನ್ನು ನೋಯಿಸಲಾರದ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಪಡೆಯುತ್ತಿದ್ದೇನೆ. ಕಲ್ಯಾಣವನ್ನು ಸೇರುವ ನನ್ನ ಮಾರ್ಗ, ಕಠಿಣ ಜೀವನದ ತಪೋಯಾತ್ರೆಯ ಮಾರ್ಗ. ಒಂದೇ ಕಡೆಯಲ್ಲಿ ನಿಲ್ಲುವುದು ನನ್ನ ಸಾಧನೆಯ ಮಾರ್ಗಕ್ಕೆ ತಕ್ಕುದಲ್ಲ. ಆದುದರಿಂದ ದಯವಿಟ್ಟು ಕ್ಷಮಿಸಬೇಕು. - ಹೀಗೆ ಮಹಾದೇವಿ ವಿನಯದಿಂದ ಆದರೂ ಸ್ಪಷ್ಟವಾಗಿ ಹೇಳಿದ್ದಳು.

ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದು, ತಮ್ಮ ಮನೆಯವರೊಬ್ಬರನ್ನು ಬೀಳ್ಕೊಡುವ ಸಂಭ್ರಮದಿಂದಲೋ ಎಂಬಂತೆ ಎಲ್ಲ ಏರ್ಪಾಡನ್ನು ಮಾಡಿದ್ದರು, ಶಿವಮ್ಮ - ಅಪರ್ಣೆಯರು.

ಮಹಾದೇವಿ ಬೆಳಗಿನ ಸ್ನಾನಪೂಜಾದಿ ವಿಧಿಗಳನ್ನು ಮುಗಿಸಿಕೊಂಡು ಬರುವ ವೇಳೆಗೆ, ಉಪಹಾರ ಇವಳಿಗಾಗಿ ಕಾಯುತ್ತಿತ್ತು ಈ ಸಾತ್ವಿಕ ಸಂಸಾರದ ಮನಃ ಪ್ರಸಾದದಂತಿದ್ದ ಆ ಶಿವಪ್ರಸಾದವನ್ನು ಸ್ವೀಕರಿಸಿ ಹೊರಟು ನಿಂತಳು.

ಅನಿರೀಕ್ಷಿತವಾಗಿ ಬಂದ ಈ ವಿಶ್ವಾಸದ ಸುಳಿಯಿಂದ ತಪ್ಪಿಸಿಕೊಂಡು ಹೊರಡುವುದು ಸ್ವಲ್ಪ ಕಷ್ಟವೇ ಆಯಿತು.

``ಕಲ್ಯಾಣ ಬಹಳ ದೂರದೇಶವಂತಲ್ಲ; ನೀನೊಬ್ಬಳೇ ಹೇಗೆ ಹೋಗುತ್ತೀಯಮ್ಮಾ ? ಮರುಕಗೊಂಡಿತು ಶಿವಮ್ಮನವರ ಮಾತೃಹೃದಯ.

``ನನಗೇನೂ ಭಯವಿಲ್ಲ ತಾಯಿ. ನನ್ನ ಆತ್ಮಸಂಗಾತಿ ಚೆನ್ನಮಲ್ಲಿಕಾರ್ಜುನ ಇದ್ದಾನೆ. ಅಲ್ಲದೆ ನಿಮಂತಹ ಹಿರಿಯರ ಆಶೀರ್ವಾದವೂ ನನ್ನ ಮೇಲಿರಲಿ ಎಂದು ಶಿವಯ್ಯನವರಿಗೂ ಶಿಮ್ಮನವರಿಗೂ ಬಾಗಿ ನಮಸ್ಕರಿಸಿದಳು.

ಶಿವಮ್ಮ ಅವಳನ್ನು ಹಿಡಿದು ಮೇಲಕ್ಕೆತ್ತುವಾಗ ಕಣ್ಣುಗಳಲ್ಲಿ ನೀರಾಡುತ್ತಿದ್ದುವು. ತಮ್ಮ ಮಗಳನ್ನೇ ಬೀಳ್ಕೊಡುವಂತೆ ಅನಿಸಿತು ಆ ದಂಪತಿಗಳಿಗೆ.

ಮಹಾದೇವಿ ಅಲ್ಲಿಂದ ಸರಸರನೆ ನಡೆಯತೊಡಗಿದಳು. ಬಹುದೂರನಡೆದು ಮರೆಯಾಗುವಾಗೊಮ್ಮೆ ತಿರುಗಿ ನೋಡಿದರೆ, ಮನೆಯ ಕಟ್ಟೆಯ ತುದಿಯಲ್ಲಿಯೇ ನಿಂತು ಅವರೆಲ್ಲರೂ ತನ್ನತ್ತಲೇ ನೋಡುತ್ತಿರುವುದು ಕಣ್ಣಿಗೆ ಬಿದ್ದಿತು. ಅವರ ಆ ವಾತ್ಸಲ್ಯದ ಹೃದಯವನ್ನು ಕಂಡು ಅಚ್ಚರಿಯಿಂದ ಆ ಸವಿನೆನಪನ್ನೇ ಮೆಲುಕು ಹಾಕುತ್ತಾ ಮುಂದೆ ನಡೆಯತೊಡಗಿದಳು.