ಬನವಾಸಿಗೆ ಆಕೆ ಹೋಗುವ ಅವಶ್ಯಕತೆಯಿಲ್ಲವೆಂದೂ, ಬನವಾಸಿಗೆ ಹೋಗುವ ಮಾರ್ಗವನ್ನು ಎಡಕ್ಕೆ ಬಿಟ್ಟು ನೇರವಾಗಿ ಮುಂದುವರಿದರೆ ಸ್ವಲ್ಪ ಮುಂದೆ ನಡೆದರೆ ಹೊಳೆಲಿಂಗೇಶ್ವರ ಸಿಗುತ್ತದೆಂದೂ, ಅಲ್ಲಿಂದ ಬಲಕ್ಕೆ ತಿರುಗಿ ಮುಂದೆ ನಡೆದರೆ ಅದು ನೇರವಾಗಿ ಉತ್ತರದ ಕಡೆಗೆ ಕೊಂಡೊಯ್ಯುತ್ತದೆಂದೂ ತಾನು ತಿಳಿದಮಟ್ಟಿಗೆ ಸೂಚನೆ ಕೊಟ್ಟಿದ್ದ. ಮಹಾದೇವಿಗೂ ಅದೇ ಸರಿಯೆಂದು ತೋರಿತ್ತು. ಅಂತೆಯೇ ಬನವಾಸಿಗೆ ಹೋಗುವ ತನ್ನ ಮೊದಲಿನ ಭಾವನೆಯನ್ನು ಬದಲಾಯಿಸಿ ನೇರವಾಗಿ ಬಂದಿದ್ದಳು ಹೊಳೆಲಿಂಗೇಶ್ವರನ ಕಡೆಗೆ.
ನದಿ ಅಲ್ಲಿ ವೇಗವಾಗಿ ಹರಿಯುತ್ತಿತ್ತು. ಅದಕ್ಕೆ ಸ್ವಲ್ಪ ಹಿಂದೆ ನದಿಯ ಮೇಲ್ಭಾಗದಲ್ಲಿ, ನಿಂತಂತೆ ಕಾಣುತ್ತಿದ್ದ ವರದಾ, ಇಲ್ಲಿ ಶಿವನನ್ನು ಮುಟ್ಟಿ ಧನ್ಯಳಾದ ಉತ್ಸಾಹದಿಂದ ಚೈತನ್ಯವನ್ನು ಪಡೆದು ವೇಗವಾಗಿ ಓಡುವಂತೆ ತೋರುತ್ತಿತ್ತು.
ಮಹಾದೇವಿ ನೀರಿಗಿಳಿದಳು. ನೀರು ಆಳವಿರಲಿಲ್ಲ. ಜಳಜಳನೆ ಹರಿಯುತ್ತಿರುವ ನೀರಿನ ತಳದ ಕಲ್ಲುಗಳು ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತಿದ್ದುವು.
ಹೊಳೆಲಿಂಗೇಶ್ವರನ ಬಳಿಗೈದಿದಳು ಮಹಾದೇವಿ. ಒಂದು ತೊಟ್ಟಿಲಿನಂತಹ ಕಲ್ಲುಮಂಟಪದ ಮಧ್ಯದಲ್ಲಿ ಶಿವಲಿಂಗ ಒಡೆದು ಮೂಡಿದಂತಿತ್ತು. ಮೇಲೊಂದು ಚಿಕ್ಕಮಂಟಪ, ಆ ವಿಶ್ವಪತಿಗೆ ನೆರಳು ಮಾಡಲು ಹವಣಿಸುತ್ತಾ ನಿಂತಿತ್ತು. ಗಂಗೆಯ ಮಧ್ಯದಲ್ಲಿ ಮೂಡಿ ನಿಂತಿರುವ ಗಂಗಾಧರನ ಸೌಂದರ್ಯಲೀಲೆಯನ್ನು ಕ್ಷಣಕಾಲ ಸವಿದಳು.
ನದಿಯ ಮಧ್ಯಭಾಗದಲ್ಲಿ ನಿಂತು ಮುಖವನ್ನು ತೊಳೆದುಕೊಂಡಳು. ಶಿವನ ಕರುಣೆಯ ಪ್ರಸಾದದಂತೆ ಹರಿದುಬರುತ್ತಿರುವ ವರದೆಯ ತಿಳಿಜಲವನ್ನು ನಾಲ್ಕು ಗುಟುಕು ಕುಡಿದಳು. ನಿಧಾನವಾಗಿ ನದಿಯ ಆಚೆಯ ದಡಕ್ಕೈದಿ ಅಲ್ಲಿರುವ ಮರಳ ಮೇಲೆ ಶಿವಲಿಂಗಕ್ಕೆ ಎದುರಾಗಿ ಕುಳಿತಳು.
ತನ್ನಿನಿಯನಾದ ಸಮುದ್ರರಾಜನನ್ನು ಹುಡುಕಿಕೊಂಡು ಓಡುತ್ತಿರುವ ವರದೆಯ ಸಂಭ್ರಮದ ಸಲಿಲದೇಹ, ಮೇಲೇರುತ್ತಿರುವ ಸೂರ್ಯನ ಕಿರಣಗಳ ಕಾಂತಿಯಲ್ಲಿ ಹೊಳೆಯುತ್ತಿತ್ತು ; ನಿರಂತರವಾಗಿ ಮೊರೆಯುತ್ತಿತ್ತು. ವರದೆಯ ಆ ಚಿರಂತನ ಗಾನ, ಮಹಾದೇವಿಯ ಜೀವನಸಂಗೀತಕ್ಕೆ ಬಂದು ಅಪೂರ್ವವಾದ ಸ್ವರಸಮ್ಮೇಳನವನ್ನು ತೋರಿಸಿಕೊಟ್ಟಂತಾಯಿತು. ತನ್ನ ಮುಂದಿರುವ ಮಾರ್ಗವನ್ನು ಸೂಚಿಸಿ ಧೈರ್ಯವನ್ನು ಕೊಟ್ಟಂತಾಯಿತು. ಮೇಲೆದ್ದು ಹೊಳೆಲಿಂಗೇಶ್ವರನಿಗೆ ಮನಸ್ಸಿನಲ್ಲಿ ವಂದಿಸಿ ಬೀಳ್ಕೊಂಡು ಮುಂದೆ ನಡೆದಳು.
ನದಿಯ ದಡದಲ್ಲಿ ಒಂದೆರಡು ಮೈಲುಗಳಷ್ಟು ದೂರದಲ್ಲಿಯೇ ಒಂದು