ಮತ್ತೊಬ್ಬ ಹೇಳಿದ : ``ಬಿರುಬಿಸಿಲಿನಲ್ಲಿ ಈ ಸುಂದರವಾದ ದೇಹವನ್ನು ಬಳಲಿಸುತ್ತಿರುವುದೇಕೆ?
ಮಹಾದೇವಿ ಹೇಳಿದಳು : ``ನಿಮ್ಮ ಅನುಕಂಪೆಗೆ ತುಂಬಾ ವಂದನೆಗಳು ಅಣ್ಣ. ಆದರೆ ನನಗೆ ಅನುಕಂಪ ಬೇಕಾಗಿಲ್ಲ. ಏಕೆಂದರೆ :
ನನ್ನ ಕಾಯ ಕರ್ರನೆ ಕಂದಿದಡೇನು ? ಮಿರ್ರನೆ ಮಿಂಚಿದೊಡೇನಯ್ಯಾ ?
ಅಂತರಂಗ ಶುದ್ಧವಾದ ಬಳಿಕ ಕಾಯವೇನಾದಡೇನಯ್ಯ?
ಚೆನ್ನಮಲ್ಲಿಕಾರ್ಜುನನೊಲಿದ ಕಾಯವೇನಾದೊಡೆ ನಿಮಗೇನಯ್ಯ ?
ಮಾತುಗಳ ದಿಟ್ಟತನದಿಂದ ಬೆಚ್ಚಿದರು. ಅಷ್ಟರಲ್ಲಿ ಕಲ್ಯಾಣಿಯಲ್ಲಿದ್ದ ನಾಲ್ಕನೆಯವನೂ ಬಂದು ಸೇರಿದ್ದ. ಮಧ್ಯವಯಸ್ಸಿನಲ್ಲಿದ್ದ ಆತ ಇವರೆಲ್ಲರಿಗೂ ಹಿರಿಯನೆಂಬಂತೆ ಕಾಣುತ್ತಿದ್ದ. ಬರುತ್ತಿದ್ದಂತೆಯೇ ಆ ಮೂವರನ್ನೂ ಗದರಿಸಿಕೊಂಡೇ ಬಂದ. ಅಷ್ಟರಲ್ಲಿ ಮಹಾದೇವಿ ಹೇಳತೊಡಗಿದಳು :
ಮುಡಿ ಬಿಟ್ಟು, ಮೊಗ ಬಾಡಿ, ತನು ಕರಗಿದವಳ,
ಎನ್ನನೇಕೆ ನುಡಿಸುವಿರಿ ಎಲೆ ಅಣ್ಣಗಳಿರಾ !
ಎನ್ನನೇಕೆ ಕಾಡುವಿರಿ ಎಲೆ ತಂದೆಗಳಿರಾ ?
ಬಲುಹಳಿದು ಭವಗೆಟ್ಟು, ಛಲವಳಿದು ಭಕ್ತೆಯಾಗಿ,
ಚೆನ್ನಮಲ್ಲಿಕಾರ್ಜುನನ ಕೂಡೆ ಕುಲವಳಿದವಳ.
ಅವಳ ಮಾತಿನಿಂದ ಅವರ ಮನಸ್ಸಿನ ಲಘುವಾದ ಭಾವನೆ ಮಾಯವಾಯಿತು. ಕ್ಷಣಕಾಲ ಮೊದಲು ಅಲ್ಲಿಗೆ ಬಂದ, ಆ ಹಿರಿಯನಂತೂ ಗೌರವಭಾವದಿಂದ ಮುಂದೆ ಬರುತ್ತಾ ಕೇಳಿದ : ``ಕ್ಷಮಿಸು, ತಾಯಿ. ಈ ಹುಡುಗರು ಏನಾದರೂ ದುಡುಕಿ ಮಾತನಾಡಿದ್ದರೆ ಕ್ಷಮಿಸಿಬಿಡು.
ಆ ಮೂವರು ಅದೇ ಮಾತನ್ನು ಹೇಳುವ ಭಾವದಿಂದಲೇ ಮಹಾದೇವಿಯನ್ನು ನೋಡುತ್ತಿದ್ದರು. ಅಷ್ಟರಲ್ಲಿ ಮಹಾದೇವಿ ಹೇಳಿದಳು :
``ಏನೂ ಯೋಚಿಸಬೇಡಿ. ಪಾಪ ! ಅವರು ಬಹಳ ಒಳ್ಳೆಯವರು. ಆದರೂ ಹೆಣ್ಣನ್ನು ಕುರಿತು ಗಂಡು ತೋರಿಸಬಹುದಾದ ಆಸಕ್ತಿ ಬೇರೆ ರೀತಿಯಲ್ಲಿರಲು ಸಾಧ್ಯವಿಲ್ಲವೇ ಎಂದು ಆಲೋಚಿಸುತ್ತಿದ್ದೆ.
``ಕ್ಷಮಿಸು, ತಾಯಿ - ಅವರೆಲ್ಲರ ಪರವಾಗಿ ಮತ್ತೆ ಆ ಹಿರಿಯನೇ ಕೇಳಿದ :
``ನಿನ್ನ ಮಾತುಗಳನ್ನು ಕೇಳಿದರೆ, ನೀನು ಸಾಮಾನ್ಯಳಲ್ಲವೆಂಬಂತೆ ತೋರುತ್ತದೆ. ಕೇವಲ ಕುತೂಹಲಕ್ಕೋಸ್ಕರವಾಗಿ ಕೇಳುತ್ತಿದ್ದೇನೆ, ನೀನು ಯಾರು ತಾಯಿ ?