ಪುಟ:Kadaliya Karpoora.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಪೋಯಾತ್ರೆ

೧೬೭

ಆ ಹಳ್ಳಿಯನ್ನು ಬಿಟ್ಟು ಸುಮಾರು ಒಂದು ತಾಸು ನಡೆದನಂತರ, ರಸ್ತೆ ನೇರವಾಗಿ ಉತ್ತರದ ಕಡೆಗೆ ತಿರುಗುತ್ತಿತ್ತು. ಅಲ್ಲಿ ಒಂದು ಮರದ ಕೆಳಗೆ ಕುಳಿತು ಸ್ವಲ್ಪ ಕಾಲ ವಿಶ್ರಮಿಸಿಕೊಂಡು ಮತ್ತೆ ನಡೆಯತೊಡಗಿದಳು.

ಈಗ ಸೂರ್ಯ ಆಕಾಶದ ತುದಿಯ ಗೋಪುರದಿಂದ ಕೆಳಕ್ಕೆ ಇಳಿಯತೊಡಗಿದ್ದ. ಇದುವರೆಗೂ ಬೆನ್ನ ಮೇಲೆ ಬೀಳುತ್ತಿದ್ದ ಬಿಸಿಲು ಈಗ ಎಡಭಾಗದಿಂದ ಬಂದು ಮಹಾದೇವಿಯ ಮುಖಕ್ಕೆ ಬೀಳುತ್ತಿತ್ತು. ಆಗಾಗ ಮರದ ನೆರಳು ಬಂದು ಬಿಸಿಲನ್ನು ಮರೆಮಾಡುತ್ತಾ ಬಿಸಿಲು - ನೆರಳುಗಳ ಕಣ್ಣು ಮುಚ್ಚಾಲೆಯನ್ನು ನಡೆಸಿತ್ತು. ಒಮ್ಮೊಮ್ಮೆ ಒಂದು ಮೋಡದ ತುಂಡು ಮಲ್ಲಿಕಾರ್ಜುನನ ಕೃಪಾಹಸ್ತದಂತೆ ತೇಲಿಬಂದು, ಕೊಡೆ ಹಿಡಿಯುತ್ತಿತ್ತು. ಅದಾವುದನ್ನೂ ಲೆಕ್ಕಿಸದೆ ಮಹಾದೇವಿ ಮುಂದೆ ಮುಂದೆ ನಡೆಯುತ್ತಿದ್ದಳು. ಹೆಜ್ಜೆ ಹೆಜ್ಜೆಗೂ ಮಲ್ಲಿಕಾರ್ಜುನನ ಮಹಾಮನೆಯತ್ತ ನಡೆಯುತ್ತಿರುವ ಭಾವ ತುಂಬಿಬರುತ್ತಿತ್ತು.

ಒಂದೆರಡು ಹಳ್ಳಿಗಳು ಹಿಂದಾದುವು. ಈಗ ಸೂರ್ಯ ಇಳಿಮುಖವಾಗಿ ಆತನ ಪ್ರಖರತೆ ಕಡಿಮೆಯಾಗತೊಡಗಿತ್ತು.

ಮಹಾದೇವಿ ನಡೆಯುತ್ತಿದ್ದ ಮಾರ್ಗದಲ್ಲಿಯೂ ಪ್ರಕೃತಿ ತನ್ನ ರೂಪವನ್ನು ಕ್ರಮೇಣ ಬದಲಾಯಿಸಿಕೊಳ್ಳತೊಡಗಿದ್ದಳು. ಮರಗಿಡಗಳು ದಟ್ಟವಾಗುತ್ತಿದ್ದುವು. ತಾನು ದಾಟಬೇಕಾಗಿರುವ ಕಾಡಿನ ದಾರಿ ಇದೇ ಇರಬೇಕೆಂದು ಊಹಿಸಿದಳು. ಗುಡ್ಡದ ಆಚೆಯ ತಪ್ಪಲಿನಲ್ಲಿಯೇ ಒಂದು ಊರು ಇರುವುದೆಂದು ಹೇಳಿದುದನ್ನು ಜ್ಞಾಪಿಸಿಕೊಂಡು, ಕತ್ತಲಾಗುವುದರೊಳಗಾಗಿ ಗುಡ್ಡವನ್ನು ದಾಟಿ ಆ ಊರನ್ನು ಆತುರದಿಂದ ವೇಗವಾಗಿ ಗುಡ್ಡವನ್ನು ಏರತೊಡಗಿದಳು.

ಸುತ್ತುಸುತ್ತಾಗಿ ಹಾವಿನಂತೆ ಸುತ್ತಿಕೊಂಡು ಹಸಿರು ಮರಗಳ ನೆರಳಿನಲ್ಲಿ ಆ ಮಾರ್ಗ ಮುಂದುವರಿಯುತ್ತಿತ್ತು. ಮುಂದೆ ಹೋದಂತೆಲ್ಲಾ ಕಾಡು ದಟ್ಟವಾಗ ತೊಡಗಿತು. ಪ್ರಖರವಾದ ಬಿಸಿಲಿನ ಅನುಭವ ಮರೆಯಾಗಿ, ಕಾಡಿನ ಪ್ರಶಾಂತವಾದ ಗಂಭೀರ ವಾತಾವರಣವು ಮಹಾದೇವಿಯ ಮನಸ್ಸನ್ನು ತುಂಬಿತು.

ಎತ್ತರವಾದ ಮರಗಳ ಮರೆಯಲ್ಲಿ ಸೂರ್ಯ ಅಡಗಿ, ಆಗಾಗ ಮುಖವನ್ನು ತೋರಿಸುವಂತೆ ಕಾಣುತ್ತಿತ್ತು. ಗಂಭೀರವಾಗಿ ಮೌನದಿಂದ ಕಾಡು ಎತ್ತರವಾಗಿ ತಲೆಯೆತ್ತಿ ನಿಂತು ಏನನ್ನೋ ನಿರೀಕ್ಷಿಸುವಂತಿತ್ತು. ಅನೇಕ ಬಗೆಯ ಹಕ್ಕಿಗಳ ಹಿಂಡು, ಕಾಡಿನ ಮೌನವನ್ನು ಮಥಿಸುತ್ತಿತ್ತು.