ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೬
ಕದಳಿಯ ಕರ್ಪೂರ

ಮಾವಿನಹಣ್ಣಿನ ಮರಗಳೂ ಅಲ್ಲಿ ಯಥೇಚ್ಛವಾಗಿವೆ. ಇತರ ಹಣ್ಣಿನ ಗಿಡಗಳೂ ಇವೆ. ಈ ಸಂದರ್ಭದಲ್ಲಿ ನಡೆದ ಒಂದು ಸಣ್ಣ ಘಟನೆ ನೆನಪಿಗೆ ಬರುತ್ತದೆ."

ಗುರುಗಳು ಗಂಭೀರಭಾವವನ್ನು ಬಿಟ್ಟು ಮುಗುಳುನಗುತ್ತಾ ಹೇಳಿದರು:

"ನಾವೆಲ್ಲಾ ಅದನ್ನು ನೋಡುವುದಕ್ಕೆ ಹೋದಾಗ ಒಂದು ತಮಾಷೆ ನಡೆಯಿತು. ಪರಿಷೆಯಲ್ಲಿ ಕೆಲವು ಉತ್ಸಾಹಿಗಳು ಹಣ್ಣಿನ ರುಚಿ ನೋಡತೊಡಗಿದರು. ಅತ್ತಿಯ ಹಣ್ಣಿನಂತೆಯೇ ಇರುವ ಒಂದು ಬಗೆಯ ಹಣ್ಣುಗಳನ್ನುಳ್ಳ ಮರಗಳು ಅಲ್ಲಿ ವಿಶೇಷವಾಗಿದ್ದುವು. ಒಬ್ಬ ಸ್ವಲ್ಪ ತಿಂದು ನೋಡಿದ, ರುಚಿಯಾಗಿದ್ದವು. 'ಅಂಜೂರದ ಹಣ್ಣು, ಅಂಜೂರದ ಹಣ್ಣು, ಎಂದು ಕರೆಯುತ್ತಾ ಎಲ್ಲರಿಗೂ ಹಂಚಿದ. ಕೆಲವರು ತಿನ್ನಲು ಹಿಂದೆಮುಂದೆ ನೋಡಿದರು. ಇನ್ನು ಕೆಲವರು ಕೊಯ್ದುಕೊಯ್ದು ತಿಂದೇತಿಂದರು. ಆದರೆ ಸ್ವಲ್ಪ ಕಾಲದಲ್ಲಿಯೇ ಪ್ರಾರಂಭವಾಯಿತು, ತಿಂದವರೆಲ್ಲರಿಗೂ ವಾಂತಿ. ಸಧ್ಯ ನಾಲ್ಕಾರು ಸಾರಿ ವಾಂತಿಯಾಗಿ ಎಲ್ಲಾ ಸರಿಹೋಯಿತು. ಏನನ್ನಾದರೂ ಅರಿತು ಸೇವಿಸಬೇಕು, ಅರಿಯದೆ ಸೇವಿಸಿದರೆ ಅನರ್ಥ ತಪ್ಪಿದ್ದಲ್ಲ-ಎಂಬ ಸತ್ಯ ಅವರೆಲ್ಲರಿಗೂ ಮನವರಿಕೆಯಾಯಿತು."

ಮತ್ತೆ ಗಂಭೀರವಾಗುತ್ತಾ ಹೇಳಿದರು ಗುರುಗಳು:

"ಇಲ್ಲಿ ನಮ್ಮ ಗಮನ ಸೆಳೆಯುವ ಅಂಶವೆಂದರೆ ಪ್ರಕೃತಿ ಸೌಂದರ್ಯ ಮತ್ತು ಸೃಷ್ಟಿ ವೈಚಿತ್ರ್ಯ. ಆ ಕಲ್ಲುಬೆಟ್ಟದ ಮಧ್ಯದಲ್ಲಿ ಇದ್ದಕ್ಕಿದ್ದಂತೆಯೇ ನೀರು ಸಿಡಿದು ಚಿಮ್ಮುತ್ತಿರುವುದು ಆಶ್ಚರ್ಯಕರವಾಗಿ ಕಾಣುತ್ತದೆ. ಅಲ್ಲಿ ಇದಕ್ಕಿಂತಲೂ ಆಶ್ಚರ್ಯಕರವಾದ ಕದಳಿಯ ಬನ ಎಂಬುದೊಂದಿದೆಯಂತೆ!"

"ಕದಳಿಯ ಬನ! ಹಾಗೆಂದರೇನು ಗುರುಗಳೇ!” ಮಹಾದೇವಿಯ ಪ್ರಶ್ನೆ.

"ನನಗೆ ಅಲ್ಲಿಗೆ ಹೋಗುವುದಕ್ಕೆ ಆಗಲಿಲ್ಲ, ಮಹಾದೇವಿ. ಆತ್ಮಕೂರಿನಿಂದ ಶ್ರೀಶೈಲದೇವಸ್ಥಾನಕ್ಕೆ ಎಷ್ಟು ದೂರವನ್ನು ನಡೆಯಬೇಕೋ, ಸ್ವಲ್ಪ ಹೆಚ್ಚುಕಡಿಮೆ ದೇವಸ್ಥಾನದಿಂದ ಕದಳಿಯ ಬನಕ್ಕೆ ಮತ್ತೆ ಅಷ್ಟು ದೂರವನ್ನು ನಡೆಯಬೇಕಂತೆ. ಮಧ್ಯದಲ್ಲಿ ಕೃಷ್ಣಾನದಿಯನ್ನು ದಾಟಬೇಕಾಗುತ್ತದೆ. ಬಹಳ ಪ್ರಯಾಸಕರವಾದ ದಾರಿ ಎಂದರು. ನನಗಿನ್ನೂ ಹೋಗುವ ಯೋಗವಿರಲಿಲ್ಲವೆಂದು ತೋರುತ್ತದೆ. ಎಷ್ಟೋ ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ.” ಅತೃಪ್ತಿಯ ಧ್ವನಿಯಿತ್ತು ಗುರುಲಿಂಗದೇವರ ಮಾತಿನಲ್ಲಿ.

"ಅಲ್ಲಿ ಏನಿದೆಯಂತೆ, ಗುರುಗಳೇ!” ಕುತೂಹಲದಿಂದ ಮತ್ತೆ ಕೇಳಿದಳು ಮಹಾದೇವಿ.