ಅಷ್ಟರಲ್ಲಿ ಅವಳ ವಿರಹದ ದುಃಖವನ್ನು ಸಂತೈಸುವಂತೆ ಹತ್ತಿರದ ಪೊದೆಯ ಮರೆಯಿಂದ ನವಿಲೊಂದು ಹೊರಬಿದ್ದು ಕೂಗುತ್ತಾ ಓಡಿಹೋಯಿತು. ಅದೇ ವೇಳೆಗೆ ನಾಲ್ಕಾರು ಗಿಳಿಗಳ ಒಂದು ಗುಂಪು ಮರದ ಮೇಲಿಂದ ಹಾರಿ ತಮ್ಮ ಗೂಡಿನತ್ತ ಮುಖವಿಡುವಂತೆ ಓಡಿದವು. ಇತರ ಹಕ್ಕಿಗಳ ಶಬ್ದಗಳು ಕಿವಿಯ ಮೇಲೆ ಬೀಳುತ್ತಿದ್ದವು. ಮರದ ಮೇಲೆ ಅರಳಿರುವ ಹೂಗಳ ಮೇಲೆ ಕುಳಿತು ಝೇಂಕರಿಸಿ ಹಾರುತ್ತಿರುವ ದುಂಬಿಗಳ ನಾದವಂತೂ ಕಿವಿಯನ್ನು ತುಂಬುವಂತಿತ್ತು. ತನ್ನ ದುಃಖವನ್ನು ಅವುಗಳ ಮುಂದಾದರೂ ತೋಡಿಕೊಳ್ಳಬೇಕೆನಿಸಿತು ಮಹಾದೇವಿಗೆ.
ಚಿಲಿಪಿಲಿಯೆಂದೋದುವ ಗಿಳಿಗಳಿರಾ ! ನೀವು ಕಾಣಿರೆ, ನೀವು ಕಾಣಿರೆ?
ಸರವೆತ್ತಿ ಪಾಡುವ ಕೋಗಿಲೆಗಳಿರಾ ! ನೀವು ಕಾಣಿರೆ, ನೀವು ಕಾಣಿರೆ ?
ಮೊರೆದು ಬಂದಾಡುವ ತುಂಬಿಗಳಿಗಾ ! ನೀವು ಕಾಣಿರೆ, ನೀವು ಕಾಣಿರೆ?
ಕೊಳನ ತಡಿಯೊಳಾಡುವ ಅಂಚೆಗಳಿರಾ ! ನೀವು ಕಾಣಿರೆ, ನೀವು ಕಾಣಿರೆ ?
ಚೆನ್ನ ಮಲ್ಲಿಕಾರ್ಜುನನೆಲ್ಲಿರ್ದಿಹನೆಂದು ಬಲ್ಲೊಡನೆ ನೀವು ಹೇಳಿರೆ; ನೀವು ಹೇಳಿರೆ.
ಎಂದು ಹಾಡಿದಳು.
`ಹೇ, ಪ್ರಕೃತಿ ಮಾತೆ, ನಿನ್ನ ಸೌಂದರ್ಯದ ಮುಖದಲ್ಲಿಯಾದರೂ ಆತನನ್ನು ತೋರಿಸು' ಎಂದು ಬೇಡಿಕೊಳ್ಳುವಂತೆ ಕ್ಷಣಕಾಲ ಕಣ್ಣು ಮುಚ್ಚಿ ಧ್ಯಾನಾಸಕ್ತಳಾದಳು. ಮತ್ತೆ ಕಣ್ದೆರೆದಳು. ಸೂರ್ಯನು ದಿಗಂತದ ಅಂಚಿನಲ್ಲಿ ಅಡಗಿ ಮರೆಯಾಗುವ ಆತುರದಿಂದ ಕೆಳಗೆ ಇಳಿಯುತ್ತಿದ್ದ. ತನ್ನ ಮುಂದಿರುವ ಮಾರ್ಗವನ್ನು ನೆನೆದು ಮೇಲೆದ್ದಳು. ಮುಂದಿನ ದಾರಿ ಅವಳನ್ನು ಗುಡ್ಡದಿಂದ ಕೆಳಕ್ಕೆ ಇಳಿಸತೊಡಗಿತು.
ಗುಡ್ಡದ ಬುಡಕ್ಕೆ ಬರುವ ವೇಳೆಗೆ ಸೂರ್ಯನಾಗಲೇ ಮುಳುಗಿ ಕತ್ತಲೆಯ ಮೊತ್ತ ಭೂಮಿಯನ್ನು ಮುತ್ತಲಾರಂಭಿಸಿತ್ತು. ಆತಿ ಹತ್ತಿರದಲ್ಲಿಯೇ ಒಂದು ಊರು ಇರುವುದನ್ನು ಗುಡ್ಡದ ಮೇಲಿಂದ ಇಳಿಯುತ್ತಿರುವಾಗಲೇ ಕಂಡಿದ್ದ ಮಹಾದೇವಿ ತನ್ನ ಹೆಜ್ಜೆಗಳ ವೇಗವನ್ನು ಅಧಿಕಗೊಳಿಸಿದಳು. ಊರಕಡೆಯಿಂದ ನಾಯಿಗಳ ಬೊಗಳುವಿಕೆ ಕೇಳಿಬರುತ್ತಿತ್ತು. ಅಲ್ಲಲ್ಲಿ ದೀಪಗಳು ಸಣ್ಣಗೆ ಮಿನುಗುತ್ತಿದ್ದವು.
ಮಹಾದೇವಿ ಊರನ್ನು ಪ್ರವೇಶಿಸಿದಳು... ಆದರೆ ಈ ಊರಿನಲ್ಲಿ ತಾನು ಎಲ್ಲಿರಬೇಕು. ಈ ರಾತ್ರಿಯನ್ನು ಕಳೆಯುವುದು ಹೇಗೆ ? ಶಿವಮ್ಮ ಅಪರ್ಣೆಯರ ವಾತ್ಸಲ್ಯದ ಉಪಚಾರದನಂತರ ಹೊಟ್ಟೆಗೆ ಏನನ್ನೂ ಹಾಕಿರಲಿಲ್ಲ. ಅದರಿಂದ ಕೋಪಗೊಂಡ ಉದರಾಗ್ನಿ ತನ್ನ ಪ್ರತಿಕ್ರಿಯೆಯನ್ನು ತೋರಿಸತೊಡಗಿತ್ತು.