`ಊಟ ಉಪಚಾರಕ್ಕೇನು ಮಾಡುತ್ತೀ ?' ಎಂದು ಮುಂತಾಗಿ ಕೇಳಿದ ತನ್ನ ತಾಯಿಗೆ ಕೊಟ್ಟ ಉತ್ತರ, ಅವಳ ಮನಸ್ಸಿನ ಮುಂದೆ ಸುಳಿಯಿತು ; `ಹಸಿವಾದರೆ ಭಿಕ್ಷಾನ್ನಗಳುಂಟು ; ತೃಷೆಯಾದರೆ ಕೆರೆ ಹಳ್ಳ ಬಾವಿಗಳುಂಟು. ಶಯನಕ್ಕೆ ಹಾಳು ದೇಗುಲವುಂಟು. ಚೆನ್ನಮಲ್ಲಿಕಾರ್ಜುನಯ್ಯ ಆತ್ಮ ಸಂಗಾತಕ್ಕೆ ನೀನೆನಗುಂಟು.'
`ನಿಜ ಈ ಮಾತನ್ನು ನೆನ್ನೆ ಹೇಳಿದೆ. ಇಂದು ಅದನ್ನು ಸಾಧಿಸಿ ತೋರಿಸಬೇಕಾಗಿದೆ' ಎಂದುಕೊಂಡಳು.
ಆದರೆ ಹೇಳುವಷ್ಟು ಸುಲಭವಲ್ಲ ಸಾಧಿಸಿ ತೋರಿಸುವುದು ; ಎಂಬ ಅನುಭವ ಮಹಾದೇವಿಗೆ ಇಂದು ಬರತೊಡಗಿತ್ತು. ಕಷ್ಟದ ಕಲ್ಪನೆಯನ್ನೇ ಕಂಡರಿಯದೆ, ತಂದೆತಾಯಿಗಳ ಮುದ್ದುಮಗಳಾಗಿ ಬೆಳೆದ ಮಹಾದೇವಿಗೆ ಇಂತಹ ಅನುಭವ ತೀರಾ ಹೊಸದು. ಆದರೂ ಅದೆಲ್ಲವನ್ನೂ ಎದುರಿಸಲು ಸಿದ್ಧವಾಗಿಯೇ ಬಂದಿದ್ದಳು.
ಊರಿನ ಪ್ರಮುಖ ಬೀದಿಯಲ್ಲಿ ನಿಧಾನವಾಗಿ ನಡೆದುಹೋಗುತ್ತಿದ್ದಳು. ಊರೇನು ಅಷ್ಟು ದೊಡ್ಡದಾಗಿರದಿದ್ದರೂ ತೀರಾ ಚಿಕ್ಕ ಹಳ್ಳಿಯೂ ಅತ್ತ ಎಂಬುದನ್ನು ಕಂಡುಕೊಂಡಳು.
ಬೀದಿಯ ಅಕ್ಕಪಕ್ಕದಲ್ಲಿದ್ದ ದೀಪಗಳು ಮಂದ ಪ್ರಕಾಶವನ್ನು ಬೀದಿಯ ಮೇಲೆ ಬೀರುತ್ತಿದ್ದವು. ಆ ಬೀದಿ ಊರಿನ ಇನ್ನೊಂದು ಕೊನೆಗೆ ತಂದು ಬಿಟ್ಟಿತು ಮಹಾದೇವಿಯನ್ನು. ಊರಿನ ಪಶ್ಚಿಮ ಭಾಗವನ್ನು ಬಳಸಿಕೊಂಡು ಬಂದ ಕೆರೆ ಅಲ್ಲಿ ಕೊನೆಗೊಳ್ಳುತ್ತಿತ್ತು. ಆ ಕೆರೆಯ ಏರಿಯ ಮೇಲೆ ಒಂದು ದೇವಾಲಯ ಕಾಣುತ್ತಿತ್ತು. ಆ ದೇಗುಲ ಇಂದು ತನ್ನ ಆಶ್ರಯಸ್ಥಾನವಾಗಬಹುದೆಂದು ಆಲೋಚಿಸಿ ಮಹಾದೇವಿ ಅತ್ತ ನಡೆದಳು.
ದೇವಾಲಯದ ಗರ್ಭಗೃಹ ಚಿಕ್ಕದಾಗಿದ್ದರೂ ಅದರ ಮುಂದಿದ್ದ ವಿಸ್ತಾರವಾದ ಕಟ್ಟಡ, ಅನಿರೀಕ್ಷಿತವಾಗಿ ಬಂದ ಪ್ರವಾಸಿಗರ ಅನುಕೂಲಕ್ಕಾಗಿಯೇ ನಿರ್ಮಿತವಾದಂತೆ ತೋರುತ್ತಿತ್ತು. ಇಂದಿನ ರಾತ್ರಿಯನ್ನು ಇಲ್ಲಿ ಕಳೆಯಬಹುದೆಂಬ ತೃಪ್ತಿಯಿಂದ ಮಹಾದೇವಿ ಅಲ್ಲಿ ಹೋಗಿ ಕುಳಿತುಕೊಂಡಳು.
ಆಯಾಸಗೊಂಡಿದ್ದ ಕಾಲುಗಳಿಗೆ ಆ ವಿಶ್ರಾಂತಿ ಹಿತಕರವಾಗಿತ್ತು.
ಆದರೆ ಬರಿದಾಗಿದ್ದ ಹೊಟ್ಟೆ ಮಾತ್ರ, ಆಕ್ರೋಶವನ್ನು ಪ್ರಾರಂಭಿಸಿತು.
``ಹೋಗು ಈ ಊರಿನಲ್ಲಿ ನಿನ್ನ ಹೊಟ್ಟೆಗೆ ಒಂದು ಹಿಡಿ ಅನ್ನ ಸಿಕ್ಕಲಾರದೆ? ಎಂದಿತು ಒಂದು ಮನಸ್ಸು.