``ಆದರೆ ಭಿಕ್ಷೆಯನ್ನು ಬೇಡುವುದು ಹೇಗೆ ?
``ಹೇಗೆ ! ಹೇಗೆ ಎನ್ನುತ್ತೀಯ ? ಹೆತ್ತ ತಂದೆತಾಯಿಗಳನ್ನು ನಿಷ್ಠುರದಿಂದ ಬಿಟ್ಟು ಬರುವಷ್ಟು ಕಲ್ಲು ಮನಸ್ಸಿನವಳಾದ ನಿನಗೆ, ಭಿಕ್ಷೆಯನ್ನು ಬೇಡಬಾರದೆಂಬ ಅಭಿಮಾನ ಕಾಡುತ್ತಿದೆಯೆ ? ಇದೇ ಅಭಿಮಾನ ನಿನಗಿದ್ದರೆ ಕಲ್ಯಾಣದವರೆಗೂ ಹೇಗೆ ನಡೆಯಬಲ್ಲೆ ? ಹೊಟ್ಟೆ ತುಂಬಬೇಕಾದರೆ ಭಿಕ್ಷೆ ಬೇಡಲೇ ಬೇಕು ಎಂದು ಹೊರಟಳು ಭಿಕ್ಷೆ ಬೇಡಲು.
``ಆದರೆ ಭಿಕ್ಷೆ ದೊರಕದೆ ಅವಮಾನವಾದರೆ ? ಅಭಿಮಾನ ಶಂಕಿಸಿತು.
``ಹೌದು. ಅಹಂಕಾರ ಅಳಿಯಲೇಬೇಕು. ಕಲ್ಯಾಣದ ಕಡೆಗೆ ಹೋಗಲು ಈ ದೇಹ ಬದುಕಬೇಕು. ಆದರೆ ಈ ದೇಹದ ಅಭಿಮಾನ ಸಾಯಬೇಕು. ಚೆನ್ನಮಲ್ಲಿಕಾರ್ಜುನಾ, ನನ್ನ ಅಹಂಕಾರ ಬೆಳೆಯುವುದಕ್ಕೆ ಅವಕಾಶವಾಗದಂತೆ, ಪರಿಪರಿಯ ಕಷ್ಟಗಳನ್ನು ಕೊಟ್ಟು ನನ್ನನ್ನು ಪರೀಕ್ಷಿಸು.
ಮನೆ ಮನೆ ತಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ,
ಬೇಡಿದೊಡೆ ನೆಲಕ್ಕೆ ಬೀಳುವಂತೆ ಮಾಡಯ್ಯ,
ನೆಲಕ್ಕೆ ಬಿದ್ದೊಡನೆ ನಾನೆತ್ತಿಕೊಂಬುದಕ್ಕೆ ಮುನ್ನವೆ
ಶುನಿ ಎತ್ತಿಕೊಂಬಂತೆ ಮಾಡಯ್ಯ ಚೆನ್ನಮಲ್ಲಿಕಾರ್ಜುನಯ್ಯ.
ಎಂದು ಆತ್ಮದ ಅಹಂಕಾರವಳಿಯುವುದಕ್ಕೆ ಸಾಂಕೇತಿಕವಾದ ವಚನವನ್ನು ಹೇಳಿಕೊಳ್ಳುತ್ತಾ ದೇವಾಲಯದಿಂದ ಎದ್ದು ಊರ ಕಡೆ ನಡೆಯತೊಡಗಿದಳು.
ಹಿಂದೆ ತಾನು ನಡೆದು ಬಂದ ಮುಖ್ಯಬೀದಿಯನ್ನು ಬಿಟ್ಟು ಅದರ ಪಕ್ಕದ ಒಂದು ಓಣಿಯನ್ನು ಪ್ರವೇಶಿಸಿದಳು ಭಿಕ್ಷೆಯನ್ನು ಬೇಡುವುದಕ್ಕಾಗಿ.
`ಬೇಡಿದೊಡೆ ಇಕ್ಕದಂತೆ ಮಾಡಯ್ಯ' ಎಂದುಕೊಂಡು ಹೋಗಿದ್ದರೂ ಬೇಡಿದ ಮೊದಲನೆಯ ಮನೆಯಲ್ಲಿಯೇ ಸಾಕಷ್ಟು ಆಹಾರ ಆಕೆಗೆ ದೊರೆಯಿತು. ಒಂದು ಎಲೆಯಲ್ಲಿ ಹಾಕಿಕೊಟ್ಟ ಅದನ್ನು ತೆಗೆದುಕೊಂಡು, ಕೆರೆಯ ದಂಡೆಯ ಕಡೆಗೆ ನಡೆದಳು.
ಅಲ್ಲಿ ಮುಖವನ್ನು ತೊಳೆದುಕೊಂಡು, ಮಲ್ಲಿಕಾರ್ಜುನನನ್ನು ಸ್ಮರಿಸಿ ಅವನಿಗೆ ಅದನ್ನು ನೈವೇದ್ಯಮಾಡಿ, ಆ ಪ್ರಸಾದವನ್ನು ಭುಂಜಿಸಿದಳು. ಹೊಟ್ಟೆಯ ಕರೆ ತಾತ್ಕಾಲಿಕವಾಗಿ ಶಾಂತವಾಯಿತು. ಅನ್ನದೇವರ ಮಹತ್ವವನ್ನು ನೆನೆಯುತ್ತಾ ಮೆಟ್ಟಲುಗಳನ್ನೇರಿ ಬಂದು, ಕೊನೆಯ ಮೆಟ್ಟಲಿನ ಕಲ್ಲುಪೀಠದ ಮೇಲೆ ಕುಳಿತಳು ಮಹಾದೇವಿ.