ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭೨
ಕದಳಿಯ ಕರ್ಪೂರ


ಹಸಿವು ಅಡಗಿ ಮನಸ್ಸು ಸ್ವಲ್ಪ ನೆಮ್ಮದಿಯಾಗಿತ್ತು. ತಲೆಯೆತ್ತಿ ನೋಡಿದಳು. ಲಕ್ಷಾಂತರ ನಕ್ಷತ್ರಗಳು ಕಿಕ್ಕಿರಿದು ಮಿನುಗುತ್ತಿದ್ದವು. ಅವುಗಳ ಮಂದ ಪ್ರಕಾಶದಲ್ಲಿ ಕೆರೆಯ ನೀರು ಹೊಗೆ ಹತ್ತಿದ ದರ್ಪಣದಂತೆ ಮಬ್ಬುಮಬ್ಬಾಗಿ ಹೊಳೆಯುವ ನಕ್ಷತ್ರಗಳನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತಿತ್ತು. ಮಧ್ಯಾಹ್ನದ ಉರಿಬಿಸಿಲು ಪರಿಹಾರವಾದುದನ್ನು ಕಂಡು ಭೂದೇವಿಯು ಸಮಾಧಾನದ ನಿಟ್ಟುಸಿರು ಬಿಡುವಂತೆ ಗಾಳಿ ಮೆಲ್ಲಮೆಲ್ಲನೆ ಬೀಸುತ್ತಿತ್ತು.

ಮಹಾದೇವಿ ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತಿದ್ದಳು. ಈ ಒಂದೆರಡು ದಿನಗಳ ಘಟನೆಗಳೆಲ್ಲಾ ಅವಳ ಮನಸ್ಸಿನ ಮುಂದೆ ಸುಳಿಸುಳಿದು ಸುತ್ತಿ ಮಾಯವಾದವು. ಇನ್ನು ತನ್ನ ಮುಂದಿರುವ ಮಹತ್ತರವಾದ ಮಾರ್ಗವನ್ನು ನೆನೆದು `ಅದೆಲ್ಲವನ್ನೂ ಎದುರಿಸಿ ಗುರಿಯನ್ನು ಮುಟ್ಟಲು ಶಕ್ತಿಯನ್ನು ಕೊಡು' ಎಂದು ತನ್ನ ಪತಿಯ ಮೊರೆಹೊಕ್ಕು ಮೇಲೆದ್ದಳು.

ಊರಿನಲ್ಲೆಲ್ಲಾ ಆಗಲೆ ಸದ್ದು ಅಡಗುತ್ತಿತ್ತು. ಮೌನ ವ್ಯಾಪಿಸುತ್ತಿತ್ತು. ಮಹಾದೇವಿ ಎದ್ದು ದೇವಾಲಯದ ಕಡೆಗೆ ನಡೆಯತೊಡಗಿದಳು.

ದೇವಾಲಯದ ಗರ್ಭಗೃಹದಲ್ಲಿದ್ದ ನಂದಾದೀಪ ತನ್ನ ಮಂದವಾದ ಬೆಳಕನ್ನು ಹೊರಗೆ ಚೆಲ್ಲುತ್ತಿತ್ತು. ಅದರ ಬೆಳಕಿನಲ್ಲಿ ಮಹಾದೇವಿ ಅಲ್ಲಿ ಯಾರೋ ಮಲಗಿರುವುದನ್ನು ಗಮನಿಸಿದಳು. ತಾನು ಮೊದಲು ಬಂದಾಗ ಅವರು ಇಲ್ಲಿ ಇರಲಿಲ್ಲ. ಯಾರೋ ಪ್ರಯಾಣಿಕರಿರಬಹುದೆಂದು ಭಾವಿಸಿ ಮಹಾದೇವಿ ಇನ್ನೊಂದು ಮೂಲೆಯ ಕಡೆಗೆ ಹೋಗಿ ಅಲ್ಲಿ ಮಲಗುವ ಏರ್ಪಾಡನ್ನು ಮಾಡತೊಡಗಿದಳು.

ಎಲ್ಲಿ ತಲೆಯಿಟ್ಟಳೋ ಅದೇ ತಲೆದಿಂಬಾಯಿತು. ಎಲ್ಲಿ ಮೈಯಿಟ್ಟಳೋ ಅದೇ ಹಾಸುಗೆಯಾಯಿತು. ಆದರೆ ಅಲ್ಲಿ ನೆಲ ತುಂಬಾ ಒರಟಾಗಿ ಉಬ್ಬು ತಗ್ಗುಗಳಿಂದ ಕೂಡಿದ್ದನ್ನು ಕಂಡು ಮೇಲೆದ್ದು ಸ್ವಲ್ಪ ಸಮಮಟ್ಟದ ನೆಲವನ್ನು ಹುಡುಕಲು ಹವಣಿಸುತ್ತಿದ್ದಳು. ಅಷ್ಟರಲ್ಲಿ ಅಲ್ಲಿ ಮಲಗಿದ್ದ ವ್ಯಕ್ತಿ ಅಲುಗಾಡಿದಂತೆ ತೋರಿತು. ಆಕೆಯನ್ನೇ ನೋಡುತ್ತಿದ್ದ ಆತ ಎದ್ದು ಕುಳಿತ. ಬಳಿಗೆ ಬಂದು ದಿಟ್ಟಿಸಿ ನೋಡಿದ.

ಮಹಾದೇವಿಯೂ ನೋಡಿದಳು. ಬಹುಶಃ ಮಧ್ಯವಯಸ್ಸನ್ನು ಸಮೀಪಿಸುತ್ತಿದ್ದ ಆತ ಕಾವಿಯನ್ನು ಹಾಕಿದ್ದ. ಕೈಯಲ್ಲಿ ಯೋಗದಂಡವೂ ಇತ್ತು. ಆತನೇ ಕೇಳಿದ : ``ಯಾರಮ್ಮ ನೀನು?