ಪುಟ:Kadaliya Karpoora.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಪೋಯಾತ್ರೆ

೧೭೩

``ನಾನೊಬ್ಬ ಪ್ರಯಾಣಿಕಳು, ಸ್ವಾಮಿ. ಈ ರಾತ್ರಿ ಇಲ್ಲಿ ಉಳಿದು ಮುಂದೆ ಪ್ರಯಾಣ ಮಾಡಬೇಕಾಗಿದೆ. ತಾವು...

``ಹೌದು, ನಾನೂ ಹಾಗೆಯೇ ಒಬ್ಬ ಪ್ರಯಾಣಿಕ" ಎನ್ನುತ್ತಾ ಆಕೆಯನ್ನೇ ದಿಟ್ಟಿಸಿ ನೋಡತೊಡಗಿದ.

``ಅಲ್ಲಿ ನೆಲ ತುಂಬ ಹಾಳಾಗಿದೆ. ಈ ಕಡೆ ಬಾ. ಹಾಸಿಕೊಳ್ಳುವುದಕ್ಕೆ ಏನೂ ಇಲ್ಲವೇ ? ನನ್ನ ಬಳಿ ಒಂದು ವಸ್ತ್ರ ಇದೆ ಕೊಡಲೇ ? ಉಪಚರಿಸಿದ ಕರುಣೆಯಿಂದಲೆಂಬಂತೆ.

``ಬೇಡಿ ಸ್ವಾಮಿ, ಏನೂ ಬೇಡಿ. - ಮಹಾದೇವಿ ಕೃತಜ್ಞತೆ ವ್ಯಕ್ತಪಡಿಸಿದಳು.

``ಪಾಪ ! ನಿನಗೆ ಇದೆಲ್ಲಾ ಅಭ್ಯಾಸವಿದ್ದಂತಿಲ್ಲ. ಕೋಮಲವಾದ ದೇಹ ಬರೀ ನೆಲದ ಮೇಲೆ ಹೇಗೆ ಮಲಗುತ್ತದೆ ? ಎಂದು ನಕ್ಕ.

``ಸಾಧಕ ಅದನ್ನೆಲ್ಲಾ ಸಹಿಸಿಕೊಳ್ಳಬೇಕಾಗುತ್ತದೆಯಲ್ಲವೆ, ಸ್ವಾಮಿ.- ಮುಗ್ಧವಾಗಿ ಹೇಳಿದಳು.

ನಿಧಾನವಾಗಿ ತನ್ನ ಸ್ಥಳಕ್ಕೆ ಹೋದ ಆತ. ಮಹಾದೇವಿ ಕುಳಿತೇ ಇದ್ದಳು. ಗರ್ಭಗೃಹದ ನಂದಾದೀಪ ಕ್ರಮೇಣ ನಂದತೊಡಗಿತು. ಇದ್ದ ಸ್ವಲ್ಪ ಬೆಳಕು ಮರೆಯಾಯಿತು. ಎಣ್ಣೆಯ ಕಮಟುವಾಸನೆ ಕ್ಷಣಕಾಲ ಆ ಸ್ಥಳವನ್ನು ಆಕ್ರಮಿಸಿತು.

ನಕ್ಷತ್ರಗಳ ಮಬ್ಬು ಬೆಳಕಿನ ಹೊರತಾಗಿ ಸುತ್ತಲೂ ಕತ್ತಲು ಆವರಿಸಿತು. ಆಯಾಸದಿಂದ ದಣಿದ ಮಹಾದೇವಿ ಹಾಗೆಯೇ ಮಗ್ಗುಲಾದಳು. ಒರಟು ನೆಲ ಒತ್ತುತ್ತಿತ್ತು. ಎಂದೂ ಇಂತಹದನ್ನು ಕಂಡರಿಯದ ದೇಹ, ಇದಕ್ಕೆ ಒಗ್ಗಿಕೊಳ್ಳಲು ತುಂಬಾ ಕಷ್ಟಪಡುತ್ತಿತ್ತು. ಅತ್ತ ಇತ್ತ ಹೊರಳುತ್ತ ನಿದ್ದೆಮಾಡಲು ಪ್ರಯತ್ನಿಸುತ್ತಿದ್ದಳು.

ಅಷ್ಟರಲ್ಲಿ ಇನ್ನೊಬ್ಬ ವ್ಯಕ್ತಿ ದೇವಾಲಯದ ಕಟ್ಟೆಯನ್ನು ಏರಿಬಂದಂತಾಯಿತು. ಮಹಾದೇವಿ ಮಲಗಿಕೊಂಡೇ ನೋಡಿದಳು. ಬಂದ ವ್ಯಕ್ತಿ ಸುತ್ತಲೂ ನೋಡಿ ದೇವಾಲಯದ ಮೆಟ್ಟಲುಗಳ ಬಳಿಯಲ್ಲಿಯೇ ಬಂದು ಒಂದು ಮೂಲೆಯಲ್ಲಿ ಆಶ್ರಯವನ್ನು ಪಡೆದು ಮಲಗಿದಂತೆ ತೋರಿತು.

ಸುತ್ತಲೂ ಮೌನ ತಾನೇತಾನಾಗಿ ಆವರಿಸಿತ್ತು. ಆಗೊಮ್ಮೆ ಈಗೊಮ್ಮೆ ಬೊಗಳುತ್ತಿದ್ದ ನಾಯಿಗಳು ಮೌನವನ್ನು ಮಥಿಸುತ್ತಿದ್ದವು.

ದಿನವೆಲ್ಲಾ ನಡೆದ ಆಯಾಸದ ಪರಿಣಾಮವಾಗಿ ಈ ಸ್ಥಿತಿಯಲ್ಲಿಯೂ ಮಹಾದೇವಿಗೆ ನಿದ್ರಾದೇವಿ ಪ್ರಸನ್ನಳಾಗುತ್ತಿರುವಂತೆ ತೋರುತ್ತಿತ್ತು. ಹಾಗೆಯೇ ಜೊಂಪುಹತ್ತಿತ್ತು.