ಅಷ್ಟರಲ್ಲಿ ಅವಳ ಕಿವಿಯ ಬಳಿಯಲ್ಲಿ ಯಾರೋ ಪಿಸುಗುಟ್ಟಿದಂತಾಯಿತು.
``ನಿದ್ದೆ ಬಂತೆ ?
``ಯಾರದು ? - ಎಂದು ಕುಳಿತಳು ಮಹಾದೇವಿ.
``ನಾನು. - ಅವಳನ್ನು ಸ್ವಲ್ಪ ಕಾಲದ ಹಿಂದೆ ಮಾತನಾಡಿಸಿದ ವೇಷಧಾರಿ ಸನ್ಯಾಸಿ ಉನ್ಮತ್ತನಂತೆ ಅವಳ ಕೈಹಿಡಿಯಲು ಹೋದ.
ಮಹಾದೇವಿ ನೆಗೆದು ಹಿಂದಕ್ಕೆ ಸರಿಯುತ್ತಾ : ``ಸರಿ ಹಿಂದಕ್ಕೆ. ಮೈ ಮೇಲೆ ಎಚ್ಚರವಿರಲಿ - ಮುಂದೆ ಬರಬೇಡ. ನೀನು ತೊಟ್ಟಿರುವ ವೇಷಕ್ಕಾದರೂ ಬೆಲೆ ಕೊಡು.
ವೇಷಧಾರಿ ಒಮ್ಮೆ ನಕ್ಕ.
``ಬೆಲೆ ! ಅದು ಹಗಲುಹೊತ್ತಿನಲ್ಲಿ. ಈಗ ಯಾರೂ ನೋಡುವುದಿಲ್ಲ, ಬಾ ಮುಂದಕ್ಕೆ...
``ಛೇ ನಾಚಿಕೆಯಾಗುವುದಿಲ್ಲವೇ ನಿನಗೆ ? ಎನ್ನುತ್ತಿದ್ದಂತೆ ಆತ ಇನ್ನೂ ಮುಂದುವರಿಯುತ್ತಾ :
``ನಾಚಿಕೆ ! - ಹುಂ... ಅದನ್ನು ಬೆಳಿಗ್ಗೆ ಹೇಳುತ್ತೇನೆ.... ಈಗ ಅದಕ್ಕೆಲ್ಲಾ ಸಮಯವಿಲ್ಲ...
ಮಹಾದೇವಿ ಹಿಂದೆ ಹಿಂದೆ ಸರಿಯುತ್ತಾ :
``ಎಚ್ಚರ, ಒಂದು ಹೆಜ್ಜೆ ಮುಂದೆ ಇಟ್ಟೀಯೆ....
``ಓಹೋ! ಹೆದರಿಸುತ್ತಿದ್ದೀಯೋ. ಇಟ್ಟರೆ ಏನು ? ಎಂದು ಕೇಳುವುದಕ್ಕೂ, ಅವನ ತಲೆಯ ಮೇಲೆ ಬಲವಾದ ಒಂದು ಏಟು ಬೀಳುವುದಕ್ಕೂ ಸರಿಹೋಯಿತು.
``ಇಟ್ಟರೆ... ಇದೇ ಎನ್ನುತ್ತಾ ಹಿಂದಿನಿಂದ ಬಂದ ವ್ಯಕ್ತಿ ಇನ್ನೊಂದೆರಡು ಏಟುಗಳನ್ನು ಕೊಟ್ಟಿತು. ಸ್ವಲ್ಪ ಹೊತ್ತಿನ ಹಿಂದೆ ಬಂದು ಮಲಗಿದ ವ್ಯಕ್ತಿಯೇ ಅದೆಂದು ಅರಿತಳು ಮಹಾದೇವಿ.
ಅನಿರೀಕ್ಷಿತವಾಗಿ ಆಘಾತದಿಂದ ತತ್ತರಿಸಿದ ವೇಷಧಾರಿ. ಆತನ ಕಾಮದ ಪಿತ್ತವೆಲ್ಲಾ ಒಂದೇ ಏಟಿಗೆ ಇಳಿದುಹೋಗಿತ್ತು. ಮತ್ತೂ ಎರಡು ಏಟುಗಳು ಬಿದ್ದುವು. ಅಪರಾಧದ ಹೊರೆಯನ್ನು ಹೊತ್ತು ಕಳೆಗುಂದಿದ ಆತ, ಈ ಸತ್ವಶಕ್ತಿಯ ಏಟನ್ನು ತಾಳಲಾರದೆ, ಬೆಂಕಿಯಲ್ಲಿ ಬಿದ್ದು ಮೈಸುಟ್ಟುಕೊಂಡ ನರಿಯಂತಾಗಿದ್ದ. ಅಲ್ಲಿದ್ದ ತನ್ನ ಸಾಮಗ್ರಿಗಳನ್ನೆಲ್ಲಾ ಬಾಚಿಕೊಂಡು ಓಡಿದ ದೇವಾಲಯದಿಂದ.