ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

``ನಿಜ, ಗುರುಗಳೇ. ಇಷ್ಟೊಂದು ಅನಿರೀಕ್ಷಿತವಾದ ರೀತಿಯಲ್ಲಿ ನೀವು ಇಲ್ಲಿಗೆ ಬಂದು ನನ್ನನ್ನು ಕಾಪಾಡಿದುದೇ ಅದಕ್ಕೆ ಸಾಕ್ಷಿ ಮಹಾದೇವಿಯ ಧ್ವನಿಯಲ್ಲಿ ಕೃತಜ್ಞತೆ ತುಂಬಿ ತುಳುಕುತ್ತಿತ್ತು.

``ನನ್ನ ರೂಪದಿಂದಲ್ಲದಿದ್ದರೆ, ಇನ್ನಾವ ರೂಪದಿಂದಲೋ, ಇನ್ನಾವ ಶಕ್ತಿಯಿಂದಲೋ ನಿನ್ನ ಪತಿ ನಿನ್ನನ್ನು ಕಾಪಾಡುತ್ತಿದ್ದ ಮಗಳೆ, ಆ ಜಗತ್ಪತಿಯನ್ನೇ ನಂಬಿ ಅವನಿಗೆ ಸಾಕ್ಷಾತ್ ಸತಿಯಾಗಿರುವ ನಿನ್ನ ಸತೀತ್ವದ ತೇಜಸ್ಸು, ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು. ಅದಕ್ಕೆ ಒಂದು ನೆಪ ಮಾತ್ರವೆಂಬಂತೆ ಬಂದೆ, ಅಷ್ಟೇ.

``ತಾವು ಇಲ್ಲಿಗೆ ಬಂದುದು ಹೇಗೆ, ಗುರುಗಳೇ ! ಮಹಾದೇವಿ ಕುತೂಹಲದಿಂದ ಕೇಳಿದಳು.

``ಅದು ಗುರುಲಿಂಗದೇವರ ಕರುಣೆಯಮ್ಮ ಎಂದು ಪ್ರಾರಂಭಿಸಿ ನಡೆದುದನ್ನೆಲ್ಲಾ ಸಂಕ್ಷೇಪವಾಗಿ ಹೇಳಿದರು :

ನಿನ್ನೆ ಮಹಾದೇವಿ ಉಡುತಡಿಯನ್ನು ಬಿಟ್ಟು ಹೊರಟು ಬರುವಾಗ ಸಂಗಮ ದೇವರು ತಮ್ಮ ಜಂಗಮಶಿಷ್ಯರೊಂದಿಗೆ, ಪಕ್ಕದ ಹಳ್ಳಿಯ ಒಂದು ಬಿನ್ನಹಕ್ಕೆಂದು ಬೆಳಗ್ಗೆ ಅಷ್ಟು ಹೊತ್ತಿಗೇ ಹೋಗಿದ್ದರು. ರಾತ್ರಿ ಹಿಂದಿರುಗಿದಾಗ ಬೆಳಗ್ಗೆ ನಡೆದ ಅಪೂರ್ವವಾದ ಘಟನೆ ತಿಳಿಯಿತು.

ಮಹಾದೇವಿ ಕಲ್ಯಾಣದತ್ತ ಹೊರಟುದನ್ನು ಗುರುಲಿಂಗದೇವರು ವಿವರವಾಗಿ ತಿಳಿಸಿದರು. ಕೊನೆಗೆ ``ಒಬ್ಬಳೇ ಹೆಣ್ಣು ಮಗಳು. ಜೊತೆಗೆ ಯಾರಾದರೂ ಹೋಗಿದ್ದರೆ ಆಗುತ್ತಿತ್ತು ಎಂದರು. ಆ ಮಾತಿನ ಅರ್ಥ ಸಂಗಮದೇವರಿಗೆ ಆಯಿತು. ಅಂತಹ ಭಾಗ್ಯ ತಮಗೆ ಬಂದುದಕ್ಕಾಗಿ ಉಬ್ಬಿದರು. ತಮ್ಮ ಶಿಷ್ಯರಿಗೆ ಮುಂದಿನ ಮಾರ್ಗದ ನಿರ್ದೇಶನವನ್ನು ಕೊಟ್ಟು, ತಾವು ಮಹಾದೇವಿಯ ಕಲ್ಯಾಣದ ಮಹಾಯಾತ್ರೆಗೆ ಸಹಾಯಕರಾಗಲು ನಿರ್ಧರಿಸಿದರು. ಗುರುಲಿಂಗರಿಗೆ ತುಂಬಾ ಸಂತೋಷವಾಯಿತು ಈ ನಿರ್ಧಾರವನ್ನು ಕೇಳಿ.

ಇದೆಲ್ಲವನ್ನೂ ಹೇಳಿ ಸಂಗಮದೇವರು ಕೊನೆಯಲ್ಲಿ ಮುಕ್ತಾಯಗೊಳಿಸುತ್ತಾ: ``ಸರಿ, ಈ ದಿನ ಬೆಳಗ್ಗೆ ಎದ್ದವನೇ ನಿನ್ನನ್ನು ಹುಡುಕಿಕೊಂಡು ಹೊರಟೆ. ನೀನು ಎರಡು ದಿನ ನಡೆದ ಮಾರ್ಗವನ್ನು ನಾನು ಇದೊಂದೇ ದಿನದಲ್ಲಿ ನಡೆದುಕೊಂಡು ಬಂದಿದ್ದೇನೆ ನೋಡು.

``ನಾವು ಇದೇ ಮಾರ್ಗದಲ್ಲಿ ಬಂದಿರುವೆನೆಂದು ಹೇಗೆ ಊಹಿಸಿದಿರಿ, ಗುರುಗಳೇ ?