ಪುಟ:Kadaliya Karpoora.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೭

ತಪೋಯಾತ್ರೆ

``ನನಗೂ ಅದು ಸಮಸ್ಯೆಯೇ ಆಗಿತ್ತು. ಬಹುಶಃ ಬನವಾಸಿಯ ಕಡೆಗೆ ತಿರುಗಿರುವೆಯೋ ಏನೋ ಎಂಬ ಅನುಮಾನವೇ ಇತ್ತು. ಅದನ್ನು ಆಲೋಚಿಸುತ್ತಾ ಕುಂತಳಾಪುರದವರೆಗೂ ಬಂದೆ. ಅಲ್ಲಿ ಪುರಾಣದ ಶಿವಯ್ಯನವರ ಮನೆಗೆ ನೇರವಾಗಿ ಹೋದೆ. ಏಕೆಂದರೆ ಕಲ್ಯಾಣದಿಂದ ನಾನು ಬರುವಾಗ ನಾಲ್ಕಾರು ದಿನಗಳ ಹಿಂದೆ ಅವರ ಪರಿಚಯವಾಗಿತ್ತು. ಅಲ್ಲಿ ನಿನ್ನ ವಿಷಯ ತಿಳಿದು, ನನ್ನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಬನವಾಸಿಯ ಕಡೆ ಹೋಗಿರಲಿಕ್ಕಿಲ್ಲವೆಂಬ ಅವರ ಮಾತನ್ನು ನಂಬಿ, ಆ ಮಾರ್ಗವನ್ನು ಬಿಟ್ಟು ಈ ಕಡೆ ತಿರುಗಿದೆ. ಮಲ್ಲಿಕಾರ್ಜುನನ ಕೃಪೆಯಿಂದ ನಿನ್ನನ್ನು ಕಂಡೆ.

ಗುರುಲಿಂಗದೇವರ ವಾತ್ಸಲ್ಯ, ಸಂಗಮದೇವರ ಕರುಣೆ, ಮಹಾದೇವಿಯ ಮನಸ್ಸನ್ನು ತುಂಬಿ ಮಾತನ್ನು ಮೌನವಾಗಿಸಿದುವು.

5

ಮಹಾದೇವಿಯ ಕಲ್ಯಾಣದ ಯಾತ್ರೆ ಸಂಗಮದೇವರ ಸಂಗಡ ಮುಂದುವರಿಯಿತು. ಕ್ಷಣಕ್ಷಣವೂ `ಕಲ್ಯಾಣ' ಎಂಬ ಮಂತ್ರವೇ ಅವಳ ಹೃದಯದಲ್ಲಿ ಮಿಡಿಯುತ್ತಾ ಅವಳ ದೇಹಕ್ಕೆ ಶಕ್ತಿಯನ್ನು ಕೊಟ್ಟು ಮುಂದೆ ನಡೆಸುತ್ತಿತ್ತು. ಅದಕ್ಕೆ ಸರಿಯಾಗಿ ಸಂಗಮದೇವರ ಸಂಗವೂ ಚೈತನ್ಯದ ಸಂಜೀವಿನಿಯಾಗಿತ್ತು.

ಕೇವಲ ಕೆಲವು ದಿನಗಳ ಹಿಂದೆ ಅದೇ ಮಾರ್ಗದಲ್ಲಿ ಬಂದಿದ್ದ ಸಂಗಮದೇವರಿಗೆ ಮಾರ್ಗದ ಪರಿಚಯ ಮಾತ್ರವೇ ಅಲ್ಲದೆ, ಒಂದೊಂದು ಊರಿನಲ್ಲಿಯೂ ವಿಶ್ವಾಸದ ಭಕ್ತರ ತಂಡವೇ ಇತ್ತು. ಇವರನ್ನು ಕಂಡುದೇ ಒಂದು ಭಾಗ್ಯವೆಂಬಂತೆ ಆ ಮುಗ್ಧ ಜನಗಳು ಉಪಚರಿಸುತ್ತಿದ್ದರು. ಮಹಾದೇವಿಗೆ ಇದನ್ನೆಲ್ಲಾ ಕಂಡು ಆಶ್ಚರ್ಯ. ಒಮ್ಮೆ ಕೇಳಿದಳು ಗುರುಗಳನ್ನು:

``ಇವರು ತೋರಿಸುತ್ತಿರುವ ವಿಶ್ವಾಸ ಸೇರಬೇಕಾದುದು ನನಗಲ್ಲಮ್ಮ., ಆ ಬಸವಣ್ಣನಿಗೆ ಸೇರಬೇಕಾದುದು ಇದೆಲ್ಲಾ. ಆತ ಕಂಡಿರುವ ವಿಶ್ವಧರ್ಮದಲ್ಲಿ ಒಂದು ಸಣ್ಣ ಅಂಶವನ್ನು ಅವನ ವಚನಗಳ ಮೂಲಕ ಇವರಿಗೆ ಕೊಟ್ಟಿದ್ದೆ. ಅಂದು ನಾನು ಇಲ್ಲೆಲ್ಲಾ ಒಂದೆರಡು ದಿನಗಳು ಉಳಿದುಕೊಂಡು ಕಲ್ಯಾಣದ ಸಂದೇಶವನ್ನು ಸಾರುತ್ತಿದ್ದೆ. ನನ್ನ ಶಿಷ್ಯರೊಡನೆ ವಚನಗಳನ್ನು ಹಾಡುತ್ತಿದ್ದೆ. ಸಮಾಜದಲ್ಲಿ ಅತ್ಯಂತ ಕೊನೆಯವನಿಗೂ ಹೀನನಿಗೂ ದೀನನಿಗೂ ದುಃಖಿಗೂ ಉದ್ಧಾರ ಉಂಟೆಂದೂ, ಧರ್ಮದಲ್ಲಿ ಎಲ್ಲರಿಗೂ ಸಮಾನ ಅಧಿಕಾರವೆಂದೂ ಹೇಳುವ ಅಣ್ಣನವರ ವಚನಗಳನ್ನು ಕೇಳಿ ಜನ ಸಂತೋಷದಿಂದ ಕುಣಿಯುತ್ತಿದ್ದರು.