ಹೀಗೆ ಪ್ರಾರಂಭವಾದ ಮಾತು ಮಹಾದೇವಿಯ ಕುತೂಹಲಕ್ಕೆ ಇನ್ನೂ ಪ್ರಚೋದನೆಯನ್ನು ಕೊಡುತ್ತಿತ್ತು. ಕಲ್ಯಾಣವನ್ನು ಕುರಿತು ಅನೇಕ ಪ್ರಶ್ನೆಗಳನ್ನು ಕೇಳುವಳು. ಸಂಗಮ ದೇವರು ತಾವು ಕಲ್ಯಾಣದಲ್ಲಿ ಪಡೆದ ಅನುಭವಗಳನ್ನೆಲ್ಲಾ ಹೇಳತೊಡಗುವರು. ಆ ಮಾತಿನಲ್ಲಿ ಲೀನವಾದ ಮಹಾದೇವಿಗೆ ದಾರಿ ನಡೆಯುತ್ತಿದ್ದುದೇ ಅರಿವಾಗುತ್ತಿರಲಿಲ್ಲ.
ಹತ್ತಾರು ದಿನಗಳ ಪ್ರಯಾಣ, ಕಲ್ಯಾಣದ ಹತ್ತಿರಹತ್ತಿರಕ್ಕೆ ಅವರನ್ನು ತರುತ್ತಿತ್ತು. ಬಸವೇಶ್ವರನ ರಾಜ್ಯದ ಗಡಿಯನ್ನು ಪ್ರವೇಶಿಸಿ ಈಗ ನಡೆಯುತ್ತಿದ್ದರು. ಆ ರಾಜ್ಯದಲ್ಲಿ ಮುಂದುವರಿದಂತೆಲ್ಲಾ ಬಸವಣ್ಣನ ಮಹಾತ್ಕಾರ್ಯಗಳ ಸೂಕ್ಷ್ಮ ಪರಿಚಯ ಮಹಾದೇವಿಗೆ ಆಗತೊಡಗಿತ್ತು.
ಒಂದು ಕಡೆಯಲ್ಲಿ, ಹಸಿದು ಬಂದವರಿಗೆ ಪ್ರಸಾದ ನಿಲಯಗಳು ಇನ್ನೊಂದು ಕಡೆಯಲ್ಲಿ ಧರ್ಮಕ್ಕಾಗಿ ಹಸಿದಿರುವ ಜನತೆಗೋಸ್ಕರ ಧರ್ಮಜಿಜ್ಞಾಸೆಯ ಸಾಂಸ್ಕೃತಿಕ ಕೇಂದ್ರಗಳು - ಇವುಗಳನ್ನು ನೋಡುತ್ತಾ ಮಹಾದೇವಿ ನಡೆಯುತ್ತಿದ್ದಳು. ರಾಜಕೀಯ ಶಕ್ತಿಯೊಡನೆ ಆಧ್ಯಾತ್ಮಿಕ ಮಹಾಸಾಧನೆಯ ದರ್ಶನವೂ ಸೇರಿದರೆ ಆಗಬಹುದಾಗ ಮಹತ್ತರವಾದ ಲೋಕಕಲ್ಯಾಣವನ್ನು ಕಾಣುತ್ತಿದ್ದಳು.
ಒಮ್ಮೆ ಒಂದು ಊರನ್ನು ದಾಟಿ ಮುಂದೆ ಹೋಗುತ್ತಿರುವಾಗ ಆ ಊರಿನ ಹೊರಭಾಗದಲ್ಲಿ ಒಂದು ಚಾವಡಿಯಂತಹ ಮನೆಯ ಮುಂದಿನ ಹಲಗೆಯ ಮೇಲೆ ಈ ಮಾತುಗಳು ಕಣ್ಣಿಗೆ ಬಿದ್ದುವು :
ದಯೆಯೇ ಧರ್ಮದ ಮೂಲವಯ್ಯ,
ಪ್ರಾಣಿಗಳನ್ನು ಕೊಲ್ಲಬೇಡಿ, ಹಿಂಸಿಸಬೇಡಿ.
- ಈ ಮುಂತಾದ ಮಾತುಗಳನ್ನು ನೋಡಿ ಮಹಾದೇವಿ ಕೇಳಿದಳು : ``ಇದೇನು ಗುರುಗಳೇ ?
``ಇವು ಪ್ರಾಣಿದಯಾಮಂದಿರಗಳು. ಮೂಕಪ್ರಾಣಿಗಳು ಬಲಿಯಾಗುವುದನ್ನು ತಡೆಯಲು ಅಣ್ಣನವರು ಕೈಗೊಂಡಿರುವ ಹೊಸಕಾರ್ಯಕ್ರಮವಿದು.
``ಎಂತಹ ಉದಾತ್ತಭಾವನೆ : `ದಯೆಯೇ ಧರ್ಮದ ಮೂಲ' - ಇದು ಧರ್ಮದ ಸಾರವನ್ನೇ ಒಳಗೊಂಡಂತೆ ತೋರುತ್ತದೆ. ಮಹಾದೇವಿ ಹೇಳಿದಳು.
``ಹೌದಮ್ಮ. ಅದನ್ನು ಅಣ್ಣನವರು ಹೇಳಿದುದು ಮಾತ್ರವಲ್ಲ, ನಿತ್ಯ ಜೀವನದಲ್ಲಿ ಆಚರಣೆಗೆ ಬರುವಂತೆ ಮಾಡಲು ಸಾಹಸಪಡುತ್ತಿದ್ದಾರೆ. ಯಾವ ಹೆಸರಿನಿಂದಲೇ ಆಗಲಿ ಪ್ರಾಣಿವಧೆಯನ್ನು ಅವರು ಸಹಿಸಲಾರರು. ಆ ಕಾರಣಕ್ಕಾಗಿಯೇ ಯಜ್ಞಯಾಗಾದಿಗಳನ್ನು ತಿರಸ್ಕರಿಸಿ ವೈದಿಕರ ಕೋಪಕ್ಕೆ ಗುರಿಯಾದರು :