ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಅಳು, ಕಂಡ್ಯಾ?
ವೇದವನೋದಿದವರ ಮುಂದೆ ಅಳು, ಕಂಡ್ಯಾ?
ಶಾಸ್ತ್ರವನೋದಿದವರ ಮುಂದೆ ಅಳು, ಕಂಡ್ಯಾ |
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವಾ
ಎಂಬ ಮಾತು ಕೋಲಾಹಲವನ್ನೇ ಉಂಟುಮಾಡಿತು. ಆದರೂ ಆ ವಿರೋಧವನ್ನು ಲೆಕ್ಕಿಸಲಿಲ್ಲ ಅಣ್ಣನವರು :
ಕೊಲುವನೇ ಮಾದಿಗ,
ಹೊಲಸ ತಿಂಬುವನೇ ಹೊಲೆಯ |
ಕುಲವೇನೋ ಆವಂದಿರ ಕುಲವೇನೋ ?
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲಸಂಗಮ ಶರಣರೇ ಕುಲಜರು
ಎಂದು ಸಾರಿದರು.
``ಎಂತಹ ಚಿರಂತನವಾದ ಸತ್ಯವನ್ನು ಸಾರಿದ್ದಾರೆ ಅಣ್ಣನವರು - ಮಹಾದೇವಿ ಉದ್ಗರಿಸಿದಳು.
``ನಿಜ ಇದು ಚಿರಂತನವಾದ ಸತ್ಯ ಹೌದು. ಆದರೆ ಅಂಧಶ್ರದ್ಧೆಯ ಸಂಪ್ರದಾಯ ಶರಣರೂ, ಸ್ವಾರ್ಥಸಾಧನೆಯ ಕುಟಿಲಜೀವಿಗಳೂ ಇದನ್ನು ಸಹಿಸಲಾರದೇ ಹೋದರು. ಅವರ ಪ್ರತಿಭಟನೆಯ ಬಿರುಗಾಳಿಯನ್ನು ಅಣ್ಣನವರು ಎದುರಿಸಬೇಕಾಗಿದೆ. ಇಂದು ಹೊಲೆಯಮಾದಿಗರೆಂಬುದು ಹುಟ್ಟಿನಿಂದ ಬರುವ ಜಾತಿಯಲ್ಲ : ಗುಣದಿಂದ ನಿರ್ಧಾರವಾಗುತ್ತವೆ - ಎಂದು ಸಾರಿದ್ದಾನೆ ಬಸವಣ್ಣ. ಅಸ್ಪೃಶ್ಯತೆ ಎನ್ನುವುದು ನಮ್ಮ ಧರ್ಮಕ್ಕೆ ಅಂಟಿದ ಕಳಂಕವೆಂದು ಘೋಷಿಸುತ್ತಿರುವುದಷ್ಟೇ ಅಲ್ಲ; ಅದನ್ನು ತೊಡೆದುಹಾಕಲು ದಿಟ್ಟತನದ ಪ್ರಯತ್ನವನ್ನು ಕೈಗೊಂಡಿದ್ದಾನೆ. ಅವರನ್ನು ಅಪ್ಪಿಕೊಂಡು ಉದ್ಧರಿಸುತ್ತಿದ್ದಾನೆ. ಅವಕಾಶವಿತ್ತರೆ ಅವರೂ ಬೆಳಯಬಲ್ಲರೆಂಬುದನ್ನು ಪ್ರತ್ಯಕ್ಷವಾಗಿ ಸಾಧಿಸಿ ತೋರಿಸಿದ್ದಾನೆ. ಹರಳಯ್ಯ, ನಾಗಿದೇವ ಮೊದಲಾದವರು ಮಹಾ ಶರಣರಾಗಿದ್ದಾರೆ, ಅನುಭವ ಮಂಟಪವನ್ನು ಅಲಂಕರಿಸಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ನೀನೇ ಪ್ರತ್ಯಕ್ಷವಾಗಿ ಅದನ್ನೆಲ್ಲಾ ನೋಡುವುದರಿಂದ ಹೆಚ್ಚಾಗಿ ಹೇಳಬೇಕಾಗಿಲ್ಲ.
ಅನುಭವಮಂಟಪದ ಆ ದೃಶ್ಯವನ್ನು ನೆನೆದು ಮಹಾದೇವಿ ಪುಳಕಿತಳಾದಳು.