ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮೦
ಕದಳಿಯ ಕರ್ಪೂರ


ಊರನ್ನು ದಾಟಿ ಈ ವೇಳೆಗೆ ಒಂದು ಕೆರೆಯ ಏರಿಯ ಮೇಲೆ ನಡೆಯುತ್ತಿದ್ದರು. ಅಷ್ಟರಲ್ಲಿ ಏರಿಯ ಆ ಕೊನೆಯಲ್ಲಿ ನಾಲ್ಕಾರು ಜನ ಗುಂಪು ಕೂಡಿರುವುದು ಕಣ್ಣಿಗೆ ಬಿತ್ತು. ಗುಂಪಿನ ಮಧ್ಯದಿಂದ ಒಂದು ಆಕ್ರಂದನ ಧ್ವನಿ ಕೇಳುತ್ತಿತ್ತು. ಸಂಗಮದೇವರು, ಮಹಾದೇವಿ ಬಳಿಗೆ ಬಂದರು.

ಎಂಟುಹತ್ತು ವರ್ಷದ ಹುಡುಗನೊಬ್ಬ ದಡದ ಹುಲ್ಲಿನ ಮೇಲೆ ನಿಶ್ಚೇಷ್ಟಿತನಾಗಿ ಬಿದ್ದಿದ್ದಾನೆ. ಉಟ್ಟ ಬಟ್ಟೆಗಳೂ ಒದ್ದೆಯಾಗಿ ದೇಹಕ್ಕೆ ಅಂಟಿಕೊಂಡಿವೆ. ತಲೆಗೂದಲು ಮುಂದಕ್ಕೆ ಇಳಿಬಿದ್ದು ಹಣೆಗೆ ಹತ್ತಿಕೊಂಡಿವೆ. ಅದರ ಜೊತೆಗೆ ಜೊಂಡು ಬೆಳೆದ ಪಾಚಿಯೂ ಸೇರಿ ಮುಖವನ್ನು ಮುಚ್ಚಿದಂತೆ ತೋರುತ್ತಿದೆ. ದೇಹಕ್ಕೆಲ್ಲಾ ಅಲ್ಲಲ್ಲಿ ಪಾಚಿ ಅಂಟಿಕೊಂಡಿರುವ ಗುರುತು ಕಾಣುತ್ತಿದೆ. ಆ ಹುಡುಗನ ತಂದೆ ಆತನ ಮೇಲೆ ಬಿದ್ದು ಬಿದ್ದು ಗೋಳಾಡುತ್ತಿದ್ದಾನೆ.

ಸಂಗಮದೇವರು ವಿಚಾರಿಸಿದರು. ತಿಳಿದುಬಂದುದು ಇಷ್ಟು :

ಆ ಬೆಸ್ತ, ಮೀನು ಹಿಡಿಯಲು ಕೆರೆಗೆ ಬಂದಿದ್ದ. ಬರುವಾಗ ತನ್ನ ಮಗನನ್ನೂ ಜೊತೆಗೆ ಕರೆದು ತಂದಿದ್ದ. ಈತ ಮುಂದೆ ನೋಡಿ ಮೀನು ಹಿಡಿಯುತ್ತಿರುವಾಗ, ತಾನೂ ಮೀನು ಹಿಡಿಯುವ ಆಟವಾಡುತ್ತಾ ಕೆರೆಯ ಕೊನೆಯ ಭಾಗಕ್ಕೆ ಹೋದ. ಅಲ್ಲಿ ಕಾಲು ಜಾರಿ ಬಿದ್ದಿದ್ದ. ಬಹಳ ಜೊಂಡು ಬೆಳೆದಿರುವ ಪ್ರದೇಶವದು. ಕೈಕಾಲು ಬಡಿಯುವುದಕ್ಕೆ ಆಗದೆ ಕೆಸರು ಜೊಂಡಿನಲ್ಲಿ ಸಿಕ್ಕಿ ಹಾಗೆಯೇ ಮುಳುಗಿಹೋಗಿದ್ದ. ಅನಂತರ ಗಾಬರಿಯಾದ ತಂದೆ ಜೊತೆಗೆ ಬೆಸ್ತರನ್ನು ಕೂಗಿ ಕರೆದ. ಹುಡುಕಿದಮೇಲೆ ದೇಹ ಸಿಕ್ಕಿತು. ಆ ಬೆಸ್ತರವನಿಗೆ ಬಹಳ ವರ್ಷಗಳ ನಂತರ ಹುಟ್ಟಿದ ಒಬ್ಬ ಮಗ. ಅವನ ದುಃಖ ಹೇಳ ತೀರದಂತಹುದು.

``ನಿನಗಾಗಿಯೇ ನಾನು ಬದುಕಿದ್ದೆನಲ್ಲಪ್ಪಾ... ನನಗೆ ಮುಂದಿನ ಗತಿ ಯಾರು ? ಅಯ್ಯೋ ದೇವರೇ, ನಿನಗೆ ಸ್ವಲ್ಪವೂ ಕರುಣೆಯಿಲ್ಲವೆ ? ಎಂದು ಮುಂತಾಗಿ ಗೋಳಾಡುತ್ತಿದ್ದ.

ಅದುವರೆಗೂ ಅವನು ಹಿಡಿದ ಮೀನಿನ ರಾಶಿ ಒಂದು ಪಕ್ಕದಲ್ಲಿ ಬಿದ್ದಿತ್ತು. ದುಃಖದಿಂದ ಎಸೆದ ಮೀನಿನ ಬುಟ್ಟಿ ಕೆಳಗೆ ಬಿದ್ದು ಓರೆಯಾಗಿ ಅದರಿಂದ ಹೊರಗೆ ಮೀನುಗಳು ಚೆಲ್ಲಿದ್ದುವು. ಮಹಾದೇವಿ ಅತ್ತ ನೋಡಿದಳು. ತನ್ನ ಮಗನಿಗಾಗಿ ಅಷ್ಟೊಂದು ಗೋಳಾಡುತ್ತಿರುವ ಬೆಸ್ತ, ಎಷ್ಟೊಂದು ಮೀನು ಇನ್ನೂ ಸಂಪೂರ್ಣವಾಗಿ ಸತ್ತಿರಲಿಲ್ಲ.

ಪುಚ್ಛವನ್ನು ಅಲ್ಲಾಡಿಸುತ್ತಾ ಅತ್ತ ಇತ್ತ ಮೆಲ್ಲನೆ ನೆಗೆದಾಡುತ್ತಾ ಮರಣವೇದನೆಯನ್ನು ಅನುಭವಿಸುತ್ತಿತ್ತು. ದೇವರ ಕರುಣೆಯನ್ನೇ