ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಪೋಯಾತ್ರೆ
೧೮೧


ಬೆಸ್ತನನ್ನು ಕಂಡು ಕನಿಕರದಿಂದ ಮರುಗುವಂತಿತ್ತು.

``ತನ್ನ ಮಗನಿಗಾಗಿ ಹೀಗೆ ಗೋಳಾಡುವ ಬೆಸ್ತನ ಹೃದಯ, ಇಷ್ಟೊಂದು ಪ್ರಾಣಿಗಳನ್ನು ಚುಚ್ಚಿಕೊಲ್ಲುವಾಗ, ಅವುಗಳ ಸಂಕಟವನ್ನು ಕಂಡು ಸ್ವಲ್ಪವೂ ಮರುಗಲಿಲ್ಲವೆ ? ಎಂದು ಆಲೋಚಿಸಿತು ಮಹಾದೇವಿಯ ಮನಸ್ಸು.

ಈ ವಯಸ್ಸಿನಲ್ಲಿ ತನ್ನ ಏಕೈಕಪುತ್ರನನ್ನು ಕಳೆದುಕೊಂಡ ಜಾಲಗಾರನ ದುಃಖ ಮಹಾದೇವಿಯನ್ನು ಸಂಕಟಗೊಳಿಸಿತು. ಆದರೆ ಅದಕ್ಕಿಂತ ಹೆಚ್ಚಾಗಿ ಅವಳನ್ನು ಸಂಕಟಗೊಳಿಸಿದುದು, ಜನಗಳು ತಮ್ಮ ಸುಖಕ್ಕಾಗಿ ಇತರ ಪ್ರಾಣಿಗಳನ್ನು ನಿಷ್ಕರುಣೆಯಿಂದ ಬಲಿಕೊಡುವ ಅಂಶ. ಅದನ್ನು ಕಂಡೇ ಬಸವಣ್ಣ `ದಯೇಯೇ ಧರ್ಮದ ಮೂಲ'ವೆಂಬ ಮಾತನ್ನು ಸಾರಿರಬೇಕೆಂದು, ಸ್ವಲ್ಪ ಕಾಲದ ಹಿಂದೆ ತಾನು ಕಂಡ ಪ್ರಾಣಿದಯಾ ಮಂದಿರವನ್ನು ನೆನೆಸಿಕೊಂಡಳು.

ಸಂಗಮದೇವರು ತತ್ಕಾಲೋಚಿತವಾಗಿ ಬೆಸ್ತರವನಿಗೆ ಸಂತೈಕೆಯ ಮಾತುಗಳನ್ನು ಹೇಳಿದರು. ಸಂಜೆಯಾಗುತ್ತಾ ಬರುತ್ತಿದ್ದುದರಿಂದ ಮುಂದಿನ ಊರನ್ನು ಜಾಗ್ರತೆ ಸೇರಿಕೊಳ್ಳಬೇಕೆಂದು ಮುಂದೆ ಹೊರಟರು ಮಹಾದೇವಿಯೊಡನೆ.

ತಾವು ಕಂಡ ದೃಶ್ಯವೇ ಇಬ್ಬರ ಮನಸ್ಸಿನಲ್ಲಿಯೂ ಸುತ್ತುತ್ತಿತ್ತು. ಸ್ವಲ್ಪದೂರ ಇಬ್ಬರೂ ಮೌನವಾಗಿ ನಡೆದರು. ಮಹಾದೇವಿ ಹೇಳಿದಳು :

``ಗುರುಗಳೇ... ನಾನೊಂದು ವಚನವನ್ನು ಬರೆಯಬೇಕೆಂದು ಮನಸ್ಸಿನಲ್ಲಿಯೇ ಆಲೋಚಿಸಿಕೊಂಡಿದ್ದೇನೆ. ಅದರ ಪ್ರಾರಂಭದ ಸ್ವಲ್ಪ ಭಾಗವನ್ನು ಹೇಳಲೇ ?

``ಹೇಳು, ಮಹಾದೇವಿ. ಕುತೂಹಲದಿಂದ ಕೇಳಿದರು ಸಂಗಮದೇವರು. ಹೇಳಿದಳು, ಮಹಾದೇವಿ : ``ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ ಹಲವು ಪ್ರಾಣಿಯ ಕೊಂದು ನಲಿದಾಡುವ. ತನ್ನ ಮನೆಯಲೊಂದು ಶಿಶು ಸತ್ತಡೆ, ಅದಕ್ಕೆ ಮರುಗುವಂತೆ ಅವಕೇಕೆ ಮರುಗನು?....

``ಭೇಷ್... ಭೇಷ್.... ! ನಗುತ್ತಾ ಹೇಳಿದರು ಸಂಗಮದೇವರು : ``ಈಗ ಕಂಡ ದೃಶ್ಯವನ್ನೇ ವಚನವನ್ನಾಗಿಮಾಡಿಬಿಟ್ಟಿದ್ದೀಯ. ಬಸವಣ್ಣನೂ ಹೀಗೆ. ತನ್ನ ರಾಜಕೀಯ ಜೀವನದ ಯಾವುದೋ ಒಂದು ದುಃಖವೋ, ಸಮಸ್ಯೆಯೋ ಎದುರಾದಾಗ ಅಥವಾ ಆಧ್ಯಾತ್ಮರಂಗದ ಭಕ್ತಿಯ ಆವೇಶ ಉಂಟಾದಾಗ ಸಹಜವಾದ ರೀತಿಯಲ್ಲಿ ವಚನಗಳನ್ನು ಉಕ್ಕಿಸುತ್ತಾನೆ.

``ಆ ಮಹಾಶಕ್ತಿಯ ಮುಂದೆ ನನ್ನದೇನು. ಗುರುಗಳೇ ! ಆದರೆ ಆ ದೃಶ್ಯವನ್ನು ಕಂಡಾಗ ಯಾಕೋ ಈ ಭಾವನೆ ಬಂದಿತು ನನ್ನ ಮನಸ್ಸಿಗೆ. ಮಗನ