ಪುಟ:Kadaliya Karpoora.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಪೋಯಾತ್ರೆ

೧೮೩

ಸಂಗಮದೇವರು ಮಹಾದೇವಿಯತ್ತ ನೋಡಿದರು. ಮಹಾದೇವಿಗೂ ವಿಷಯವೆಲ್ಲಾ ಅರ್ಥವಾಗಿತ್ತು. ಬಂದವರಲ್ಲೊಬ್ಬ ಮತ್ತೆ ತನ್ನ ಮಾತನ್ನು ಮುಂದುವರಿಸಿದ : ``ನಮ್ಮ ಊಹೆ ಸರಿಯೆಂದು ತೋರುತ್ತಿದೆಯಲ್ಲವೇ, ಸ್ವಾಮಿ. ಬಸವೇಶ್ವರರು ಹೇಳಿರುವ ಗುರುತುಗಳನ್ನು ನೆನಸಿಕೊಂಡರೆ ತಮ್ಮ ಬಳಿ ಇರುವ ಈ ಮಹಾದೇವಿಯವರೇ...

ಮಾತು ಮುಗಿಯುವುದಕ್ಕೆ ಮುನ್ನ ಸಂಗಮದೇವರು ಹೇಳಿದರು.

``ನಿಜ, ನಿಮ್ಮ ಊಹೆ ಸರಿಯಾದದ್ದು. ಯಾವ ಮಹಾಮಾತೆಯ ಬರುವಿಗಾಗಿ ಬಸವಣ್ಣನವರು ಆಸಕ್ತಿಯನ್ನೂ ಕುತೂಹಲವನ್ನೂ ತಳೆದಿದ್ದಾರೆಯೋ ಆ ಶಿವಶರಣೆಯೇ ಈ ಮಹಾದೇವಿ.

ತನ್ನ ಬರವಿಗಾಗಿ ಬಸವಣ್ಣ ತಳೆದಿರುವ ಕುತೂಹಲವನ್ನು ಕಂಡು ಮಹಾದೇವಿಗೆ ಅಪೂರ್ವವಾದ ಅನುಭವವಾಯಿತು.

ಅಷ್ಟರಲ್ಲಿ ಒಬ್ಬ ಹೇಳಿದ : ``ಸ್ವಾಮಿ, ಇದು ನಮ್ಮ ಸುದಿನ. ಇಂದು ಇಲ್ಲಿನ ಪ್ರಸಾದಮಂದಿರದಲ್ಲಿ ತಾವು ಆತಿಥ್ಯವನ್ನು ಪಡೆದು ಬೆಳಿಗ್ಗೆ ಹೊರಡಬೇಕು, ತಮ್ಮ ಪ್ರಯಾಣಕ್ಕೆ ಎಲ್ಲಾ ಏರ್ಪಾಡುಗಳನ್ನು ಮಾಡುತ್ತೇನೆ.

ಸಂಗಮದೇವರು ಮಹಾದೇವಿಯನ್ನು ನೋಡಿದರು. ಮಹಾದೇವಿ ಹೇಳಿದಳು : ``ನಿಮ್ಮ ವಿಶ್ವಾಸಕ್ಕೆ ತುಂಬಾ ವಂದನೆಗಳು. ಆದರೆ ಕಲ್ಯಾಣದ ನಮ್ಮ ಪ್ರಯಾಣಕ್ಕೆ ಯಾವ ಏರ್ಪಾಡನ್ನೂ ಮಾಡುವುದು ಬೇಡ. ಆ ತಪೋಯಾತ್ರೆ ಇದುವರೆಗೆ ನಾವು ಬಂದಂತೆ ಕಾಲುನಡೆಗೆಯಲ್ಲೇ ಮುಂದುವರಿಯಬೇಕು. ಯಾರೂ ಅರಿಯದಂತೆ ಆಜ್ಞಾತವಾಗಿ ಸಾಗಬೇಕು. ಯಾವ ಸೌಕರ್ಯವನ್ನೂ ನಾವು ಬಯಸುವುದಿಲ್ಲ.

``ಆಗಬಹುದು ತಾಯಿ : - ಭಕ್ತ ಹೇಳಿದ : ``ಆದರೆ ಈಗ ಕತ್ತಲಾಗುತ್ತಿದೆ. ವಿಶ್ರಮಿಸಿಕೊಳ್ಳುವುದಕ್ಕೆ ತಮ್ಮ ಒಪ್ಪಿಗೆ ಇದೆಯಷ್ಟೆ ?

ಮಹಾದೇವಿ ಗುರುಗಳತ್ತ ನೋಡಿದಳು ಗುರುಗಳು ಹೇಳಿದರು :

``ಹೌದು ಮಹಾದೇವಿ. ಇಂದು ಇಲ್ಲಿದ್ದು ನಾಳೆ ಬೆಳಗ್ಗೆ ಹೊರಡಬಹುದಲ್ಲವೆ?

ಮಹಾದೇವಿ ತನ್ನ ಒಪ್ಪಿಗೆಯನ್ನು ಸೂಚಿಸಿದಳು. ಎಲ್ಲರೂ ಪ್ರಸಾದ ಮಂದಿರದತ್ತ ನಡೆಯತೊಡಗಿದರು.