೬
ಆ ಪ್ರಸಾದಮಂದಿರದಲ್ಲಿ ನಿತ್ಯ ದಾಸೋಹ ಇತ್ತು. ಆದರೆ ಅದು ಕೆಲಸ ಮಾಡಲಾರದ ಸೋಮಾರಿಗಳಿಗೆಲ್ಲಾ ಅನ್ನವನ್ನು ಹಾಕುವ ಛತ್ರವಾಗಿರಲಿಲ್ಲ. ಅನಿರೀಕ್ಷಿತವಾಗಿ ಅಲ್ಲಿ ಉಳಿಯಬೇಕಾಗಿಬಂದ ಪ್ರಯಾಣಿಕರಿಗೆ ಆದರದ ಆತಿಥ್ಯ ಸಿದ್ಧವಾಗಿತ್ತು. ಆದರೆ ಅಲ್ಲಿಯೇ ಇದ್ದು ಕೆಲಸ ಮಾಡದೆ ಸೋಮಾರಿಗಳಾಗಿರುವವರಿಗೆ ಅಲ್ಲಿ ಪ್ರವೇಶವಿರಲಿಲ್ಲ. ಅದು ಬಸವಣ್ಣನವರ ಕಟ್ಟಳೆಯಾಗಿತ್ತು.
ಅಲ್ಲಿರುವವರೆಲ್ಲ ಒಂದು ರೀತಿಯ ಕಾಯಕವನ್ನು ಕೈಕೊಂಡೇ ಇದ್ದರು. ಆ ಊರಿನ ಸುತ್ತಮುತ್ತಲ ಹಳ್ಳಿಗಳಿಗೆ ಹೋಗಿ ಧರ್ಮೋಪದೇಶ ಮಾಡುವವರು ಕೆಲವರು ; ಊರನ್ನು ಚೊಕ್ಕಮಾಡುವ ಕೆಲಸ ಮಾಡಿ ತೋರಿಸುವವರು ಕೆಲವರು. ಹೀಗೆ ಬೌದ್ಧಿಕವೋ, ದೈಹಿಕವೋ - ಒಂದಲ್ಲ ಒಂದು ರೀತಿಯ ಕಾಯಕವನ್ನು ಮಾಡುವವರಿಗೆ ಮಾತ್ರ ಅಲ್ಲಿ ಅವಕಾಶ.
ಪ್ರತನಿತ್ಯವೂ ಅಲ್ಲಿ ಪುರಾಣಪುಣ್ಯಕಥೆಗಳು, ಧಾರ್ಮಿಕ ಜಿಜ್ಞಾಸೆಗಳು, ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು.
ಇದೆಲ್ಲಾ ಪರಿಚಯವನ್ನು ಕೇಳುತ್ತಾ ಮಹಾದೇವಿ ಮತ್ತು ಸಂಗಮದೇವರು ಪ್ರಸಾದಮಂದಿರಕ್ಕೆ ಬಂದರು. ಮಂದಿರದಲ್ಲಿ ಶರಣರ ಸುಂದರವಾದ ಅನೇಕ ಉಕ್ತಿಗಳು ಕಣ್ಣಿಗೆ ಬಿದ್ದುವು. `ಕಾಯಕವೇ ಕೈಲಾಸ' ಎಂಬ ಮಾತು ಎದ್ದು ಕಾಣುವ ದೊಡ್ಡ ಅಕ್ಷರಗಳಿದ್ದು ಎಲ್ಲರ ಗಮನವನ್ನು ಸೆಳೆಯುವಂತಿತ್ತು.
ಅಂದು ರಾತ್ರಿ ಅಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಮಹಾದೇವಿ ಆಶ್ಚರ್ಯಗೊಂಡಳು. ಹೆಜ್ಜೆ ಹೆಜ್ಜೆಗೂ ಅಲ್ಲಿ ಅಣ್ಣನ ಆದರ್ಶಗಳ ಕೈವಾಡ ಕಾಣುತ್ತಿತ್ತು. ಮೇಲು - ಕೀಳೆಂಬ ಯಾವ ಭೇದಭಾವವೂ ಇಲ್ಲದೆ ಊರಿನ ನೂರಾರು ಜನರು ಬಂದು ಅದರಲ್ಲಿ ಆಸಕ್ತಿಯಿಂದ ಭಾಗವಹಿಸಿ ಪ್ರಯೋಜನವನ್ನು ಪಡೆಯುತ್ತಿದ್ದರು. ಸನ್ನಿವೇಶದಿಂದ ಸ್ಫೂರ್ತಿಗೊಂಡವರಾಗಿ ಸಂಗಮದೇವರು ಅಲ್ಲಿದ್ದ ಇತರ ಜಂಗಮರೊಡನೆ ಸೇರಿ ವಚನಗಳನ್ನು ಹಾಡಿದರು:
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ ;
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು ಕೂಡಲಸಂಗಮದೇವ
ಎಂಬ ವಚನವನ್ನು ಕೇಳಿದಾಗಲಂತೂ ಮಹಾದೇವಿಗೆ ಬಸವಣ್ಣನವರ ಜೀವನದ