``ಇಲ್ಲ, ಮಹಾದೇವಿ, ನನ್ನ ಶಿಷ್ಯರಿಗೆ ಹಂಪೆಯ ಕಡೆಗೆ ಬರುವಂತೆ ಹೇಳಿ ಬಂದಿದ್ದೆ. ಅಲ್ಲಲ್ಲಿ ಪ್ರವಚನ ಮಾಡುತ್ತಾ ನಿಧಾನವಾಗಿ ಅವರು ಅಲ್ಲಿಗೆ ಬರುತ್ತಾರೆ. ನಾನು ಅಷ್ಟರಲ್ಲಿ ಅಲ್ಲಿಗೆ ಹೋಗಿ ಅವರನ್ನು ಕೂಡಿಕೊಳ್ಳುತ್ತೇನೆ. ಅಲ್ಲಿಂದ ಮತ್ತೆ ದಕ್ಷಿಣದ ಕಡೆಗೆ ಹೋಗುತ್ತೇವೆ.
``ಅಂದು ಅನಿರೀಕ್ಷಿತವಾಗಿ ಸಾಕ್ಷಾತ್ ಕೂಡಲಸಂಗಮನೇ ಅವತರಿಸಿದಂತೆ ಬಳಿಗೆ ಬಂದಿರಿ. ಇದುವರೆಗೂ ನನ್ನನ್ನು ರಕ್ಷಿಸಿದಿರಿ. ಈಗ ನಿಮ್ಮನ್ನು ಅಗಲಿ ನಾನು ಮುಂದಕ್ಕೆ ಹೇಗೆ ಹೋಗಲಿ, ಗುರುಗಳೇ ಎನ್ನುವಾಗ ಮಹಾದೇವಿಯ ಕಣ್ಣುಗಳಲ್ಲಿ ಹನಿಯಾಡುತ್ತಿತ್ತು.
``ಯೋಚಿಸಬೇಡ, ಮಗಳೇ ನಿನ್ನ ಹುಟ್ಟಿದೂರನ್ನೂ, ತಂದೆತಾಯಿಗಳನ್ನೂ ಬಿಟ್ಟು ಬಂದಿರುವ ಮಾಯಾಮೋಹವರ್ಜಿತವಾದ ನಿನ್ನ ಹೃದಯಕ್ಕೆ ಇದು ಬಂಧನವಾಗಲಾರದು. ಮಾನವೀಯವಾದ ವಾತ್ಸಲ್ಯ ತಾತ್ಕಾಲಿಕವಾಗಿ ನಿನ್ನನ್ನು ಹಾಗೆ ನುಡಿಸುತ್ತಿದೆ. ಅದನ್ನು ಬದಿಗಿಡು. ಕಲ್ಯಾಣದಲ್ಲಿ ಶರಣರ ಅನುಭವದಿಂದ ನಿನ್ನ ಸಾಧನೆ ಪೂರ್ಣಗೊಳ್ಳುತ್ತದೆ. ಚೆನ್ನಮಲ್ಲಿಕಾರ್ಜುನನ ಚೆನ್ನಸತಿಯಾಗಿ ಸಮರಸ ಸುಖವನ್ನು ಪಡೆಯುತ್ತೀಯ.
ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಮಹಾದೇವಿ ನಮಸ್ಕರಿಸಿದಳು. ಮೇಲೇಳುತ್ತಾ ಹೇಳಿದಳು:
``ಮತ್ತೆ ತಮ್ಮ ದರ್ಶನ ಯಾವಾಗ ಗುರುಗಳೇ ?
``ಹೀಗೇ... ಶಿವನಿಚ್ಛೆ ಇದ್ದರೆ ನನ್ನ ಧರ್ಮಯಾತ್ರೆಯನ್ನು ಮುಗಿಸಿಕೊಂಡು ಮತ್ತೆ ಕಲ್ಯಾಣಕ್ಕೆ ಬರಬೇಕೆಂಬ ಆಸೆಯುಳ್ಳವನಾಗಿದ್ದೇನೆ. ಆಗ ನೋಡೋಣ. ಇಲ್ಲವಾದರೆ ನಮ್ಮ ನಮ್ಮ ಹೃದಯಗಳಲ್ಲಿ ಈ ಭಾವನೆ ಸದಾ ಜೀವಂತವಾಗಿರುವುದರಿಂದ ಹೊರಗಿನ ದರ್ಶನಕ್ಕಾಗಿ ಹಂಬಲಿಸುವುದು ಬೇಡ - ಎಂದು ತೃಪ್ತರಾಗೋಣ. ಜಂಗಮ ಎನ್ನುವ ಮಾತಿನ ಅರ್ಥ ಇದೇ. ಜಂಗಮವಾದ ಈ ಜಗತ್ತಿನಲ್ಲಿ ಸದಾ ಸಂಚರಿಸುತ್ತಾ ಅಚಲವಾದ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ನಿಶ್ಚಲ ಮನಸ್ಸುಳ್ಳವರಾಗಿರುವುದು. ನಿನ್ನ ಸಾಧನೆ ಆ ಮಟ್ಟಕ್ಕೇರಲಿ. ನಿನ್ನಲ್ಲಿ ಸಹಜವಾಗಿರುವ ಆ ಶಕ್ತಿ, ಸಾಧನೆಯಿಂದ ಸಾರ್ಥಕವಾಗಲಿ. ಸ್ತ್ರೀತ್ವದ ಪರಿಪೂರ್ಣತೆಯಿಂದ ಜಗತ್ತಿಗೊಂದು ದಿವ್ಯಸಂದೇಶ ದೊರಕಲಿ. ನಾನಿನ್ನು ಬರುತ್ತೇನೆ, ತಾಯಿ ಎಂದು ಅಲ್ಲಿಂದ ಹೊರಟರು ಸಂಗಮದೇವರು