ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಪೋಯಾತ್ರೆ
೧೮೭


ಮಹಾದೇವಿ ಮಾತನಾಡುವುದನ್ನೂ ಮರೆತು ಅವರನ್ನೇ ನೋಡುತ್ತಿದ್ದಳು. ಅವರು ಮರೆಯಾದಮೇಲೂ ಸ್ವಲ್ಪ ಹೊತ್ತು ಪ್ರಸಾದಮಂದಿರದ ಕಟ್ಟೆಯ ಮೇಲೆ ನಿಶ್ಚಲವಾಗಿ ಕುಳಿತಿದ್ದಳು.

ಇದನ್ನೆಲ್ಲಾ ನೋಡುತ್ತಿದ್ದ ಪ್ರಸಾದಮಂದಿರದ ವ್ಯವಸ್ಥೆಯ ಅಧಿಕಾರಿ ಸ್ವಲ್ಪ ಹೊತ್ತಿನ ಅನಂತರ ಮೆಲ್ಲಗೆ ಹತ್ತಿರ ಬಂದು, ಗೌರವಪೂರ್ಣವಾದ ಭಾವನೆಯಿಂದ ಕೇಳಿದ :

``ತಾಯಿ, ಬಿಸಿಲೇರುತ್ತಿದೆ ; ತಮ್ಮ ಮುಂದಿನ ಪ್ರಯಾಣಕ್ಕೆ ಹೊತ್ತಾಗುತ್ತದೆ. ಮಹಾದೇವಿ ಎಚ್ಚತ್ತವಳಂತೆ ಎದ್ದು ನಿಂತಳು.

``ಹೌದು ಹೊತ್ತಾಗುತ್ತದೆ.... ಎಚ್ಚರಿಸಿ ಒಳ್ಳೆಯದು ಮಾಡಿದಿರಿ. ನಾನಿನ್ನು ಹೊರಡುತ್ತೇನೆ.

``ತಮ್ಮ ಪ್ರಯಾಣಕ್ಕೆ ತಕ್ಕ ವ್ಯವಸ್ಥೆಯನ್ನು ನಾನು ಮಾಡುತ್ತೇನೆ. ಕಲ್ಯಾಣಕ್ಕೆ ತಮ್ಮನ್ನು ಕಳುಹಿಸಿಕೊಡುತ್ತೇನೆ - ಹೇಳಿದ ಅಧಿಕಾರಿ.

``ಕ್ಷಮಿಸು ಅಣ್ಣ, ಇದುವರೆಗೂ ಬಂದಂತೆಯೇ ನಾನು ಮುಂದೆಯೂ ನಡೆಯತಕ್ಕವಳು.

``ಇದುವರೆಗೂ ಗುರುಗಳು ಜೊತೆಯಿದ್ದರು. ಈಗ ತಾವು ಒಬ್ಬರೇ ಆಗಿದ್ದೀರಿ...

``ಈಗಲೂ ನಾನೊಬ್ಬಳೇ ಅಲ್ಲ, ಗುರುಗಳು ಅತ್ತ ಹೋದರೂ ಅವರ ಕೃಪಾಶೀರ್ವಾದ ನನ್ನ ಬೆನ್ನ ಹಿಂದೆಯೇ ಬರುತ್ತದೆ. ಆದ್ದರಿಂದ ನನಗೇನೂ ಯೋಚನೆಯಿಲ್ಲ. ನಾನಿನ್ನು ಬರುತ್ತೇನೆ ಎಂದು ಹೊರಟೇಬಿಟ್ಟಳು. ಹೆಚ್ಚೇನೂ ಹೇಳಲಾರದೆ ನಿಂತು ನೋಡುತ್ತಿದ್ದ ಅಧಿಕಾರಿ.

`ಗುರುಗಳ ಆಶೀರ್ವಾದ ಬೆನ್ನಹಿಂದೆಯೇ ಇದೆ'ಯೆಂದು ಹೇಳಿದರೂ ಮಹಾದೇವಿಗೆ ಹೆಜ್ಜೆ ಹೆಜ್ಜೆಗೂ ಏಕಾಂತತೆಯ ಅನುಭವ ಆಗತೊಡಗಿತ್ತು.

ಇದುವರೆಗಿನ ತನ್ನ ಜೀವನದ ಚಿತ್ರಗಳೆಲ್ಲಾ ಮನಸ್ಸಿನ ಮುಂದೆ ಸುಳಿಯುವುವು. ತಂದೆತಾಯಿಗಳನ್ನು ನೆನೆಸಿಕೊಳ್ಳುವಳು ; ಗುರುಗಳ ಸ್ಮರಣೆ ಉಕ್ಕುವುದು.

ಅವರೆಲ್ಲರನ್ನೂ ಬಿಟ್ಟು ಬಂದ ತಾನು ಇಂದು ಏಕಾಂಗಿನಿ ಎಂಬ ಭಾವವೂ ಒಮ್ಮೊಮ್ಮೆ ಸುಳಿಯುವುದು. ಉರಿಯುತ್ತಿರುವ ಬಿಸಿಲಿನಲ್ಲಿ ಮಿಂಚುತ್ತಿರುವ ಆ ಕಪ್ಪು ಮಣ್ಣಿನ ವಿಸ್ತಾರವಾದ ಬಯಲಿನಲ್ಲಿ ನಡೆಯುತ್ತಿರುವಾಗ ಹೊರಗಿನ ಬಸಿಲೇ ಅಂತರಂಗದಲ್ಲಿ ಉಕ್ಕಿಬಂದು ಗಂಟಲನ್ನು ಹಿಡಿದಂತಾಗುವುದು. ಆದರೆ