ಮತ್ತು ಸಂಕ್ಷಿಪ್ತವಾದ ಉತ್ತರವನ್ನು ಕೊಡುತ್ತಿದ್ದರು ಗುರುಲಿಂಗರು. ಕೇಳುತ್ತಿದ್ದವರಿಗೂ ಅದು ತೃಪ್ತಿಯನ್ನುಂಟುಮಾಡುತ್ತಿತ್ತು.
ಎಷ್ಟೋ ಹೊತ್ತಿನವರೆಗೆ ಹೀಗೆ ಬರುವ ಹೋಗುವ ಭಕ್ತರ ಸಂಭ್ರಮದಿಂದ ಓಂಕಾರನ ಮನೆಯು ಮಠವೇ ಆಗಿ ಪರಿಣಮಿಸಿತ್ತು.
ಮನೆಯ ಒಳಗೂ ಸ್ತ್ರೀಯರ ಸಂಭ್ರಮ ಪ್ರಾರಂಭವಾಗಿತ್ತು.
ಲಿಂಗಮ್ಮನು ಕರೆದುಬಂದ ಅಕ್ಕಪಕ್ಕದ ಮನೆಯ ಮುತ್ತೈದೆಯರು ಬಂದು ಕೆಲಸದಲ್ಲಿ ಅವಳಿಗೆ ನೆರವಾಗತೊಡಗಿದ್ದರು. ಮನೆ ಸಂಭ್ರಮ ಸಂತೋಷಗಳಿಂದ ನಗುತ್ತಿತ್ತು.
ಇದಕ್ಕೆಲ್ಲ ಕಾರಣಳಾದ ಮಹಾದೇವಿ ಒಳಗೂ ಹೊರಗೂ ನಲಿದಾಡುತ್ತಿದ್ದಳು. ನಾಲ್ಕಾರು ಜನ ಗೆಳತಿಯರನ್ನೂ ಕರೆದುಕೊಂಡು ಬಂದಿದ್ದಳು. ಅವರನ್ನು ಕುಳ್ಳಿರಿಸಿಕೊಂಡು ತಾನು ಕೇಳಿದ್ದ ಶ್ರೀಶೈಲದ ಕಥೆಯನ್ನು ಅವರಿಗೆ ಹೇಳುತ್ತಿದ್ದಳು.
ಓಂಕಾರ ಮಗಳನ್ನು ನೋಡಿದ. ಇಂದಿನ ಸಂತೋಷದಿಂದ ಅವನ ಮನಸ್ಸು ತುಂಬಿಬಂದಿತ್ತು. ಹಿಂದೊಮ್ಮೆ ಇಂಥದೇ ಸಂತೋಷವನ್ನು ಈ ಮಗಳಿಂದಲೇ ತಾನು ಕಂಡುದನ್ನು ನೆನಸಿಕೊಂಡ. ಅದು ಮಹಾದೇವಿ ಹುಟ್ಟಿದ ದಿನ. ಮಕ್ಕಳಿಲ್ಲದ ತಮ್ಮ ಜೀವನದ ಕೊರಗು ತುಂಬಿ ಬಂದ ಸಂತೋಷ ಮತ್ತು ಅನಿರೀಕ್ಷಿತವಾಗಿ ಮಹಾಮಹಿಮ ಮರುಳು ಸಿದ್ಧೇಶ್ವರರು ಆಗಮಿಸಿ ಅವಳಿಗೆ ದೀಕ್ಷೆಯನ್ನು ಮಾಡಿದ ಮಹತ್ವಪೂರ್ಣವಾದ ಸನ್ನಿವೇಶ-ಇವುಗಳನ್ನು ತಿರುವಿಹಾಕತೊಡಗಿತು ಅವನ ಮನಸ್ಸು.
ಅದು ಓಂಕಾರ ಎಂದೆಂದೂ ಮರೆಯಲಾಗದಂತಹ ಘಟನೆ. ಚೊಚ್ಚಲು ಹೆರಿಗೆ; ಅದು ಮದುವೆಯಾದ ಬಹಳ ವರ್ಷಗಳ ಮೇಲೆ. ಅದಕ್ಕಾಗಿ ಓಂಕಾರ ಎಲ್ಲ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದ. ಆದರೆ ಕಣ್ಣುಮುಚ್ಚಿ ತೆರೆಯುವುದರೊಳಗಾಗಿ ಎನ್ನುವಂತೆ ಎಲ್ಲಾ ಸುಗಮವಾಗಿ ನೆರವೇರಿತ್ತು. ಲಿಂಗಮ್ಮ ಹೆಣ್ಣು ಕೂಸಿಗೆ ಜನ್ಮವಿತ್ತಿದ್ದಳು.
ಅನುಭವಿಕರಾದ ತನ್ನ ಹತ್ತಿರದ ಸಂಬಂಧಿ ಮಹಿಳೆಯರನ್ನು ಈ ಮೊದಲೇ ಬರಮಾಡಿಕೊಂಡಿದ್ದ ಮತ್ತು ಇತರ ಕೆಲಸಗಾರರನ್ನು ಯಾವುದಕ್ಕೂ ಕೊರತೆಯಾಗದಂತೆ ನೇಮಿಸಿಕೊಂಡಿದ್ದ. ಅವರೆಲ್ಲಾ ಸಂಭ್ರಮದಿಂದ ಮುಂದಿನ ಸಿದ್ಧತೆಯಲ್ಲಿ ತೊಡಗಿದ್ದರು. ನೆರೆಹೊರೆಯ ಹಿರಿಯ ಮಹಿಳೆಯರೂ ಸಹಾಯವನ್ನಿತ್ತು ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು.