ತಾತ್ಕಾಲಿಕವಾದ ನನ್ನ ಮೋಹದ ದೃಷ್ಟಿಯಿಂದ ನಿನ್ನನ್ನು ಚಂಚಲಗೊಳಿಸಬೇಕೆಂಬ ಪ್ರಯತ್ನದಿಂದ ನಟನೆಯನ್ನು ಕೈಕೊಂಡೆ. ಆದರೆ ನೀನು ಹತ್ತಿರ ಹತ್ತಿರ ಬಂದಂತೆಲ್ಲಾ ಆ ಮನೋಧರ್ಮವೇ ಬದಲಾಗಿ ಹೋಯಿತು, ತಾಯಿ. ನಿನ್ನ ಈ ಸುಂದರವಾದ ದೇಹದಲ್ಲಿ ಸಾಮಾನ್ಯ ಹೆಣ್ಣಿನ ಮೋಹಕವಾದ ಆಕರ್ಷಣೆಯನ್ನು ಅಣುಮಾತ್ರವೂ ಕಾಣದಾದೆ. ನಿನ್ನ ಕಣ್ಣುಗಳಲ್ಲಿಯೂ ವೈರಾಗ್ಯ ಮೈವೆತ್ತು ಪ್ರಜ್ವಲಿಸುತ್ತಿರುವುದನ್ನು ಕಂಡುಕೊಂಡೆ. ನಿನ್ನ ಕಣ್ಣುಗಳಲ್ಲಿರುವ ದೈವಿಕ ಶಕ್ತಿ ನನ್ನನ್ನು ಚುಚ್ಚಿ ಎಚ್ಚರಗೊಳಿಸಿತು. ಕ್ಷಣಕಾಲವಾದರೂ ನನ್ನ ಮನಸ್ಸಿನಲ್ಲಿ ಈ ಭಾವನೆಯುಂಟಾದುದು ಅಪರಾಧವಲ್ಲವೇ? ಅದಕ್ಕಾಗಿ ನನ್ನನ್ನು ಕ್ಷಣಿಸಬೇಕು.
``ಇಲ್ಲ, ಅಣ್ಣಾ ! ಅದು ಅಪರಾಧವಲ್ಲ. ನಿಮ್ಮೆಲ್ಲರ ಪರೀಕ್ಷೆಯ ಅಗ್ನಿಕುಂಡದಲ್ಲಿ ಹಾಕಿ ನನ್ನ ಒರೆಗೆ ಹಚ್ಚಿ ನೋಡಿರಿ. ಕಡಿದು ಬಡಿದು ನೋಡಿರಿ. ಕಾಳಿಕೆಯನ್ನು ಕಳೆಯಿರಿ - ಹೇಳಿದಳು ಮಹಾದೇವಿ.
``ಅದು ಬಹಳ ದೊಡ್ಡ ಮಾತು. ಕಾಳಿಕೆಯಿಲ್ಲದ ಶುದ್ಧ ಅಪರಂಜಿಯ ವಿಗ್ರಹದಂತೆ ನೀನು ಬಂದಿದ್ದೀಯ, ತಾಯಿ - ವಿನಯದಿಂದ ಹೇಳಿದ ಕಿನ್ನರಿ ಬೊಮ್ಮಣ್ಣ.
``ಒಂದು ವೇಳೆ ಅದೇ ನಿಜವಾದರೂ, ಈ ವಿಗ್ರಹಕ್ಕೆ ಅನುಭಾವದ ಪ್ರಾಣ ಪ್ರತಿಷ್ಠೆಯಾಗಬೇಕಾಗಿದೆ. ಅಣ್ಣಾ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಈ ಕಲ್ಯಾಣದ ಶರಣರ ಸಮ್ಮುಖದಲ್ಲಿ, ಅವರ ಕೃಪೆಯಿಂದ ನನ್ನ ಕಲ್ಯಾಣವಾಗಬೇಕಾಗಿದೆ.
`ಆಗಬಹುದು ಮಹಾದೇವಿ, ದಯಮಾಡಿಸಬೇಕು. ಈ ಸ್ವಾಗತವನ್ನು ಬಯಸುವ ಗೌರವವನ್ನು ನನಗೆ ಕೊಟ್ಟ ಅಣ್ಣನವರು ನನ್ನ ಮೇಲೆ ಅಪಾರವಾದ ಅನುಗ್ರಹವನ್ನು ಮಾಡಿದ್ದಾರೆ. ಅದನ್ನು ನಾನು ಎಂದೂ ಮರೆಯಲಾರೆ - ಹೀಗೆ ದಯಮಾಡಿಸಬೇಕು.
ಎಂದು ಮಹಾದೇವಿಯನ್ನು ಕರೆದುಕೊಂಡು ಹೊರಟ. ಕೋಟೆಯ ಗೋಡೆಯ ಬಳಿಗೆ ಬಂದರು. ಅದರಿಂದ ಎಡಕ್ಕೆ ತಿರುಗಿ ಸ್ವಲ್ಪ ದೂರ ನಡೆಯುವ ವೇಳೆಗೆ ಮಹಾದ್ವಾರ ಕಾಣಿಸಿತು. ಅಲ್ಲಿದ್ದ ಇಬ್ಬರು ಕಾವಲುಗಾರರು ಬಂದು ನಮಸ್ಕರಿಸಿದರು. ಗೌರವದಿಂದ ಹಿಂದಕ್ಕೆ ಸರಿದು ಇಬ್ಬರನ್ನೂ ಒಳಗೆ ಬರಮಾಡಿಕೊಂಡರು. ಮಹಾದೇವಿ ಬೊಮ್ಮಯ್ಯನೊಡನೆ ಕಲ್ಯಾಣವನ್ನು ಪ್ರವೇಶಿಸಿದಳು.
ಇದುವರೆಗೂ ತನ್ನ ಕಲ್ಪನೆಯಲ್ಲಿ ಕಂಡ ಕಲ್ಯಾಣವನ್ನು ಈಗ ಸಾಕ್ಷಾತ್ತಾಗಿ ಪ್ರವೇಶಿಸಿ ನಡೆಯುತ್ತಿರುವ ತನ್ನ ಭಾಗ್ಯವನ್ನು ಸ್ಮರಿಸಿಕೊಂಡು ಹಿಗ್ಗಿ ನಲಿಯುತ್ತಾ