ಪುಟ:Kadaliya Karpoora.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಪೋಯಾತ್ರೆ

೧೯೧

ಬೊಮ್ಮಣ್ಣನನ್ನು ಹಿಂಬಾಲಿಸುತ್ತಿದ್ದಳು.

ಆಕೆಯ ದೃಷ್ಟಿಯಲ್ಲಿ ಕಲ್ಯಾಣವೆಂಬುದು ಕೇವಲ ಒಂದು ಪಟ್ಟಣವಾಗಿರಲಿಲ್ಲ. ಭಕ್ತಿರಸ ಪರಿಪೂರ್ಣನಾದ ಬಸವನೆಂಬ ಸ್ವಯಂಜ್ಯೋತಿಯನ್ನು ಬೆಳಗುತ್ತಿರುವ ಪ್ರಣತೆಯಂತೆ ಕಾಣಿಸಿತು.

`ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನ್ನೆರೆದು ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿರ್ದುದಯ್ಯ ಶಿವನ ಪ್ರತಾಪ !...' ಎಂದು ಪ್ರಭುದೇವರು ಹೇಳಿರುವ ಮಾತುಗಳನ್ನು ಸ್ಮರಿಸಿಕೊಂಡಳು. ಆ ಬೆಳಕಿನಲ್ಲಿ ಬೆಳಗುತ್ತಾ ಕಿರಣಗಳಂತೆ ಸಂಚರಿಸುತ್ತಿದ್ದ ಅಸಂಖ್ಯಾತ ಭಕ್ತಗಣಗಳನ್ನು ನೋಡುತ್ತಾ ಬರುತ್ತಿದ್ದಳು. ಇಂತಹ ಕಲ್ಯಾಣವನ್ನು ಹೊಗುವುದು ಸಾಮಾನ್ಯರಿಗೆ ಸಾಧ್ಯವಿಲ್ಲ :

ಕಲ್ಯಾಣವೆಂಬುದನಾರಿಗೆ ಹೊಗಬಾರದು,

ಹೊಗಬಾರದು, ಹೊಗಬಾರದು, ಅಸಾಧ್ಯವಯ್ಯ !

ಆಸೆ ಆಮಿಷವನಳಿದವಂಗಲ್ಲದೆ ಕಲ್ಯಾಣದತ್ತಲಡಿ ಇಡಬಾರದು !

ಒಳಹೊರಗು ಶುದ್ಧವಾದವರಿಗಲ್ಲದೆ ಕಲ್ಯಾಣವ ಹೊಗಬಾರದು !

ನಾನೆಂಬುದ ಹೞೆದವಂಗಲ್ಲದೆ ಕಲ್ಯಾಣವ ಹೊಗಬಾರದು,

ಒಳಗು ತಿಳಿದು, ಚೆನ್ನಮಲ್ಲಿಕಾರ್ಜುನಂಗೊಲಿದು,

ಉಭಯಲಜ್ಜೆಯಳಿದೆನಾಗಿ, ಕಲ್ಯಾಣವ ಕಂಡು,

ನಮೋ ನಮೋ ಎನುತಿರ್ದೆನು.

ಎಂದು ಕಲ್ಯಾಣದ ಮಹತ್ವವನ್ನು ಸಾಂಕೇತಿಕವಾಗಿ ವರ್ಣಿಸಿಕೊಳ್ಳುತ್ತಾ ನಡೆಯುತ್ತಿದ್ದಳು. ಅಷ್ಟರಲ್ಲಿ ಬೊಮ್ಮಣ್ಣ ದೂರದಿಂದಲೇ ತೋರಿಸಿ ಹೇಳಿದ :

``ಅದೇ ಅಣ್ಣನವರ ಮಹಾಮನೆ !

ಎತ್ತರವಾದ ಆ ಹಮರ್ಯ್‌ದ ಗೋಪುರದ ಭಾಗ ಮಾತ್ರ ಕಾಣಿಸಿತು. ಇನ್ನೂ ಮುಂದೆ ಹೋದಂತೆ ಭವ್ಯವಾದ ಆ ಪ್ರಾಸಾದ ಕಣ್ಣಿಗೆ ಬಿತ್ತು. ಕಲ್ಯಾಣವನ್ನೆಲ್ಲಾ ತನ್ನ ಧರ್ಮದ ರಕ್ಷೆಯಲ್ಲಿಟ್ಟು ಕಾಯುವ ಉದಾತ್ತತೆಯ ಸಂಕೇತವೆಂಬಂತೆ ಎತ್ತರವಾಗಿ ತಲೆಯೆತ್ತಿ ನಿಂತಿತ್ತು ಈ ಮಹಾಮನೆ.

`ಮಹಾಮನೆ !... ಹೌದು. ಅಂಧಶ್ರದ್ಧೆಯ ಅಂಧಕಾರವನ್ನು ಹೋಗಲಾಡಿಸಿ, ನಾಡಿಗೆಲ್ಲ ಧರ್ಮದ ಬೆಳಕನ್ನು ಬೀರುತ್ತಿರುವ ಈ ಮನೆ, ಮಹಾಮನೆಯೇ ಹೌದು' ಎಂದು ಆಲೋಚಿಸುತ್ತಾ ಮಹಾದೇವಿ ಮುಂದುವರಿಯುವಷ್ಟರಲ್ಲಿ