ಮಹಾಮನೆಯ ಸಮೀಪಕ್ಕೆ ಬಂದಿದ್ದರು. ಅದರ ಆವರಣದ ಹೆಬ್ಬಾಗಿಲನ್ನು ಪ್ರವೇಶಿಸಿದರು. ಅಷ್ಟರಲ್ಲಿ ಅಪ್ಪಣ್ಣ ಎದುರುಗೊಳ್ಳಲು ಬರುತ್ತಿರುವುದನ್ನು ಕಂಡು ಬೊಮ್ಮಯ್ಯ ಹೇಳಿದ :
``ಅಪ್ಪಣ್ಣಾ, ಮಹಾಶಿವಶರಣೆ ಮಹಾದೇವಿಯನ್ನು ಸ್ವಾಗತಿಸು.
ಮೂವರೂ ಮುಂದೆ ನಡೆದು ಮಹಾಮನೆಯನ್ನು ಪ್ರವೇಶಿಸಿದರು.
``ಗೋಷ್ಠಿ ಪ್ರಾರಂಭವಾಗಿದೆಯೇ, ಅಪ್ಪಣ್ಣಾ ? - ಬೊಮ್ಮಯ್ಯ ಕೇಳಿದ. ಆದರೆ ಕಾರ್ಯಕ್ರಮ ಇನ್ನೂ ಪ್ರಾರಂಭವಾಗುವ ಸಮಯ. ಎಲ್ಲರೂ ಬಂದು ಸೇರಿದ್ದಾರೆ. ಆದರೆ ಕಾರ್ಯಕ್ರಮ ಇನ್ನೂ ಪ್ರಾರಂಭವಾಗಿಲ್ಲ. ಇಂದು ಪ್ರಭುದೇವರು ಶೂನ್ಯ ಸಿಂಹಾಸನದಲ್ಲಿ ಅಂತರ್ ಮುಖವಾಗಿ ಕುಳಿತುಬಿಟ್ಟಿದ್ದಾರೆ. ಬಹುಶಃ ಅವರು ಮಹಾದೇವಿಯನ್ನು ನಿರೀಕ್ಷಿಸುತ್ತಿರುವಂತೆ ತೋರುತ್ತಿದೆ. ದಯಮಾಡಿಸಬೇಕು, ತಾಯಿ.
``ತಾಳು ಪ್ರಭುದೇವರಲ್ಲಿ ನಿವೇದಿಸಿಕೊಂಡು ಬರುತ್ತೇನೆ ಎಂದು ಬೊಮ್ಮಣ್ಣ ಅನುಭವಮಂಟಪದ ಕಡೆಗೆ ಓಡಿದ.
ಅಣ್ಣನವರ ಮಹಾಮನೆಯ ಮುಂಭಾಗದ ಒಂದು ಕೊನೆಯಲ್ಲಿ ಆವರಣದ ಗೋಡೆಗೆ ಸೇರಿದಂತೆ ಒಂದು ನೂತನ ಕಟ್ಟಡ ನಿರ್ಮಾಣವಾಗಿತ್ತು. ಅಲ್ಲಿ ಪ್ರತಿನಿತ್ಯವೂ ಶರಣರ ಕ್ರಾಂತಿಕಾರಕವಾದ ವಿಚಾರಗಳ ಧರ್ಮಜಿಜ್ಞಾಸೆ ನಡೆಯುತ್ತಿತ್ತು. ಅನುಭಾವದ ವಿಚಾರ ಮಥನವಾಗುತ್ತಿತ್ತು. ಅದನ್ನೇ ಶರಣರು `ಅನುಭವಮಂಟಪ' ಎಂದು ಕರೆಯುತ್ತಿದ್ದರು.
ಅನುಭಾವದ ಮಹಾಮೇರು ಅಲ್ಲಮಪ್ರಭುದೇವ ಅದರ ಅಧ್ಯಕ್ಷ. ಅವನು ಬಂದು ಶೂನ್ಯಸಿಂಹಾಸನವನ್ನು ಅಲಂಕರಿಸಿದ ಮೇಲೆ ಅನುಭವಮಂಟಪಕ್ಕೆ ಜೀವಸಂಚಾರವಾದಂತಾಗಿತ್ತು. ಬಸವಣ್ಣನ ಕನಸು ನನಸಾಗತೊಡಗಿತ್ತು.
ವಿಷಯವನ್ನು ಮಂಡಿಸುವುದಕ್ಕಾಗಲೀ ಮಥಿಸುವುದಕ್ಕಾಗಲೀ ಚರ್ಚೆಯ ದಿಕ್ಕನ್ನು ನಿರ್ದೇಶಿಸುವುದಕ್ಕಾಗಲೀ ಅಲ್ಲಮನ ವ್ಯಕ್ತಿತ್ವವೇ ಕೇಂದ್ರವಾಗಿ ಪರಿಣಮಿಸಿತ್ತು. ಅಂತಹ ಪ್ರಭುದೇವ ಇಂದು ಅಂತರ್ಮುಖನಾಗಿ ಕುಳಿತಿರುವುದಕ್ಕೆ ಕಾರಣವನ್ನು ಊಹಿಸಿ ಬೊಮ್ಮಣ್ಣ, ತಾನು ಕರೆದು ತಂದಿರುವ ವ್ಯಕ್ತಿಯ ಬರವನ್ನು ತಿಳಿಸಲು ಅತ್ತ ನಡೆದ.
ಇತ್ತ ಅಪ್ಪಣ್ಣ ಮಹಾದೇವಿಯ ಆತಿಥ್ಯಕ್ಕಾಗಿ ಪ್ರಯತ್ನ ಮಾಡತೊಡಗಿದ. ಆದರೆ ಮಹಾದೇವಿ ಆದಾವುದನ್ನೂ ಸ್ವೀಕರಿಸುವಂತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಿನ ಆತಿಥ್ಯ ಅನುಭವಮಂಟಪದ ಕಡೆಯಿಂದ ಬರಬೇಕಾಗಿತ್ತು ಆಕೆಗೆ. ಬಹುದಿನದ