ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೯೪
ಕದಳಿಯ ಕರ್ಪೂರ


ಕಂಡುಕೊಂಡಳು. ಅವನ ಪಕ್ಕದಲ್ಲಿರುವ ಹುಡುಗನೇ ಬಹುಶಃ ಚನ್ನಬಸವಣ್ಣನಿರಬೇಕು - ಎಂದುಕೊಂಡಳು. ಆದರೆ ಅವರ ಪಕ್ಕದಲ್ಲಿ ಶೂನ್ಯಪೀಠದ ಎಡಭಾಗದಲ್ಲಿರುವವರು ಯಾರೆಂಬುದು ಆಕೆಗೆ ಹೊಳೆಯಲಿಲ್ಲ.

ಶರಣರ ಗುಂಪನ್ನೆಲ್ಲಾ ಒಟ್ಟಿಗೆ ತನ್ನ ಕಣ್ಣುಗಳಿಂದ ತುಂಬಿಕೊಂಡಳು. ಇನ್ನೊಂದು ಕಡೆ ಶರಣೆಯರು. ಮಾತೃಹೃದಯದ ವಾತ್ಸಲ್ಯದಿಂದಲೆಂಬಂತೆ ತನ್ನತ್ತಲೇ ನೋಡುತ್ತಿದ್ದಾರೆ.

ಹೀಗೆ ಅನುಭವಮಂಟಪವನ್ನೆಲ್ಲಾ ಒಮ್ಮೆ ಸುತ್ತಿಬಂದ ದೃಷ್ಟಿ ಮತ್ತೆ ಶೂನ್ಯ ಸಿಂಹಾಸನದ ಮೇಲೆ ಕೇಂದ್ರೀಕೃತವಾಯಿತು.

ಮೆಲ್ಲಗೆ ಮುಂದೆ ಹೆಜ್ಜೆಯನ್ನಿಡತೊಡಗಿದಳು. ಅಷ್ಟರಲ್ಲಿ ಅದನ್ನೇ ಕಾಯುತ್ತಿದ್ದನೆಂಬಂತೆ ಶರಣರ ಗುಂಪಿನಿಂದ ಮಡಿವಾಳ ಮಾಚಯ್ಯ, ಮಡಿಮಾಡಿ ತಂದ ಶುಭ್ರವಸ್ತ್ರವನ್ನು ನಡೆಮಡಿಯನ್ನಾಗಿ ಹಾಸತೊಡಗಿದ. ಮಹಾದೇವಿ ಗಕ್ಕನೆ ನಿಂತಳು.

ಪ್ರಭುದೇವನ ಸಿಂಹಾಸನದವರೆಗೂ ನಡೆಮಡಿಯನ್ನು ಹಾಸಿಕೊಂಡು ಹೋಗಿದ್ದ ಮಾಚಯ್ಯ. ಮಹಾದೇವಿ ನಡೆಮಡಿಯ ಬಳಿಗೆ ಬಂದಳು ; ಆದರೆ ಅದರ ಮೇಲೆ ನಡೆಯಲಿಲ್ಲ. ಬಾಗಿ ಆ ನಡೆಮಡಿಯನ್ನೆತ್ತಿ ದೇಹಕ್ಕೆಲ್ಲಾ ಹೊದೆದುಕೊಂಡಳು. ಆನಂದದಿಂದ ಅವಳ ಮುಖ ಮಿನುಗಿತು.

ಅನಂತರ ನಡೆಮಡಿಯನ್ನು ತೆಗೆದುಪಕ್ಕಕ್ಕೆ ಇಡುತ್ತಾ ಮಹಾದೇವಿ ಈಗ ಶೂನ್ಯ ಪೀಠದ ಕಡೆಗೆ ಬರುತ್ತಿದ್ದಳು. ಅಲ್ಲಮಪ್ರಭು ಎವೆಯಿಕ್ಕದೆ ಇದನ್ನೆಲ್ಲಾ ನೋಡುತ್ತಿದ್ದ.

ಶೂನ್ಯಸಿಂಹಾಸನದಿಂದ ಸ್ವಲ್ಪ ದೂರದಲ್ಲಿ ಮಹಾದೇವಿ ನಿಂತಳು. ಅದರ ಮೇಲಿದ್ದ ಶೂನ್ಯಮೂರ್ತಿಗೆ ಅಲ್ಲಿಂದಲೇ ಬಾಗಿ ನಮಸ್ಕರಿಸಿ ಮೇಲೆದ್ದಳು.

ಬಿಚ್ಚಿ ಹರಡಿದ್ದ ನೀಳವಾದ ಅವಳ ತಲೆಯ ಕೂದಲಸಮೂಹ ಬೆನ್ನ ಮೇಲೆಲ್ಲಾ ಹರಡಿದ್ದವು. ಹರಕು ಚಿಂದಿಯಂತಹ ಏಕವಸ್ತ್ರವನ್ನು ಧರಿಸಿದ್ದ, ಹದಿನಾರು ಹದಿನೆಂಟು ವರ್ಷಗಳ ಏರುಯೌವನದಲ್ಲಿದ್ದ ಅವಳ ದೇಹಸೌಂದರ್ಯವನ್ನು ಆ ಕೂದಲಸಮೂಹ ಮರೆಮಾಡಲು ಹವಣಿಸುವಂತೆ ತೋರುತ್ತಿತ್ತು. ಬೇಕೆಂತಲೇ ಪ್ರಭುದೇವ ಅವಳನ್ನೇ ದಿಟ್ಟಿಸಿ ನೋಡಿದ.

ಹೆಣ್ಣು ಪಡೆಯಬಹುದಾದ ದೈಹಿಕ ಸೌಂದರ್ಯವು ಪೂರ್ಣತೆಯನ್ನು ಪಡೆದಂತೆ ತೋರುತ್ತಿತ್ತು ಮಹಾದೇವಿಯ ದೇಹದಲ್ಲಿ. ಇಂತಹ ಅಪೂರ್ವ ರೂಪ ಸಂಪತ್ತು ರಾಜನ ಗಮನವನ್ನು ಆಕರ್ಷಿಸಿದುದರಲ್ಲಿ ಆಶ್ಚರ್ಯವೇನೂ ಇಲ್ಲವೆಂದು, ಅವಳ