ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೯೬
ಕದಳಿಯ ಕರ್ಪೂರ


ಜನ್ಮದಲ್ಲಿ ಅದು ಸಿದ್ಧಿಸಿದೆ. ಗುರು ನನ್ನನ್ನು ಚೆನ್ನಮಲ್ಲಿಕಾರ್ಜುನನಿಗೆ ಮದುವೆ ಮಾಡಿಕೊಟ್ಟಿದ್ದಾನೆ :

ಗುರುವೆ ತೆತ್ತಿಗನಾದ ; ಲಿಂಗವೇ ಮದುವಳಿಗನಾದ ;
ಅನು ಮದವಣಗಿತ್ತಿಯಾದೆನು ;
ಈ ಭುವನವೆಲ್ಲವರಿಯಲು ಅಸಂಖ್ಯಾತರೆನಗೆ ತಾಯಿತಂದೆಗಳು.
ಕೊಟ್ಟರು ಪ್ರಭುವಿನ ಮನೆಗೆ ಸಾದೃಶ್ಯವಪ್ಪ ವರನ ನೋಡಿ ;
ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನೆನಗೆ,
ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧವಿಲ್ಲಯ್ಯಾ ಪ್ರಭುವೇ.

``ನಿಮ್ಮ ಮನೆಗೆ ಸೊಸೆಯಾಗಿ ನಾನು ಬಂದಿದ್ದೇನೆ. ಹೀಗಿರಲು ನನ್ನ ಪತಿಯ ಕುರುಹನ್ನು ಎದುರಿಟ್ಟು ಹೇಳಬೇಕೆ ?

ಮಹಾದೇವಿಯ ಮಾತುಗಳನ್ನು ಕೇಳಿ ಶರಣರು ತಲೆದೂಗಿದರು. ಬಸವಣ್ಣನೂ ಸಂತೋಷಗೊಂಡು ಪ್ರಭುವನ್ನು ನೋಡಿದ. ಪ್ರಭುದೇವ ಮನಸ್ಸಿನಲ್ಲಿಯೇ ಮೆಚ್ಚಿದರೂ ಅದನ್ನು ತೋರಗೊಡದೆ ಮತ್ತೆ ಹೇಳಿದ :

``ಮಾತಿನಚಮತ್ಕಾರಕ್ಕೆ ನಮ್ಮ ಶರಣರು ಮೆಚ್ಚುವವರಲ್ಲ, ಮಹಾದೇವಿ ನಿನ್ನ ಚರಿತ್ರೆಯನ್ನು ಲೋಕ ಅರಿಯದೆಂದು ಭಾವಿಸಬೇಡ. ನಿನ್ನನ್ನು ಮದುವೆಯಾದ ಕೌಶಿಕನ ಮೇಲೆ ತಪ್ಪನ್ನು ಹೊರಿಸಿ, ಸೀರೆಯನ್ನುಳಿದು ನಿರ್ವಾಣವಾಗಿ ಅರಮನೆಯಿಂದ ಹೊರಟುಬಂದಿರುವೆ ಎಂಬ ಮಾತು ನಿಜವೇ ? ಒಂದು ತಪ್ಪಿಗಾಗಿ ಪತಿಯನ್ನು ಬಿಟ್ಟುಬರುವ ಸತೀಧರ್ಮವನ್ನು ಶರಣರು ಒಪ್ಪಲಾರರು.

ಮಹಾದೇವಿಯನ್ನು ಚುಚ್ಚಿತು ಈ ಮಾತು. ಮರೆತುಹೋದ ಹಳೆಯ ಕಥೆಯಂತಿದ್ದ ಆ ಘಟನೆಗಳನ್ನು ಅವಳ ಮನಸ್ಸಿನ ಮುಂದೆ ಹರಡಿತು. ಅದನ್ನು ಸಾಮಾನ್ಯ ಜಗತ್ತು ಕಾಣಬಹುದಾದ ರೀತಿಯಲ್ಲಿ ಪ್ರಭುದೇವನೂ ಕಂಡು ಕೇಳಿದಾಗ ಆಕೆಗೆ ಸಂಕಟವಾಯಿತು. ಜಗತ್ತಿಗೆ ಈ ಮೂಲಕ ಸತ್ಯವನ್ನು ಸಾರಬೇಕೆಂಬ ಸಂಕಲ್ಪ ಉತ್ಕಟವಾಗಿ ಉಕ್ಕಿಬಂದಿತು. ಆವೇಶಗೊಂಡವಳಂತಾಗಿ ಹೇಳಿದಳು :

``ಇದನ್ನು ಕೇಳಿ ಒಳ್ಳೆಯದನ್ನೇ ಮಾಡಿದಿರಿ. ನನ್ನ ಮದುವೆಯ ಕಥೆಯನ್ನು ಪ್ರಪಂಚ ಹೇಗಾದರೂ ತಿಳಿದುಕೊಂಡಿರಲಿ. ಇಲ್ಲಿ ಶರಣರ ಎದುರು ನಿಂತು ಹೇಳುತ್ತಿದ್ದೇನೆ ; ನಾನು ಮೊದಲಿನಿಂದಲೂ ಚೆನ್ನಮಲ್ಲಿಕಾರ್ಜುನನಿಗೇ ಮೀಸಲ ಹೆಣ್ಣು. ಸಾವ ಕೆಡುವ ಗಂಡರನ್ನೆಂದೂ ನಾನು ಬಯಸಿದವಳಲ್ಲ. ಸೀಮೆಯಿಲ್ಲದ ನಿಸ್ಸೀಮಚೆಲುವನಿಗೆ ಮಾತ್ರ ಒಲಿದವಳು ನಾನು. ಗುರುಲಿಂಗ ದೇವರು ಚಿಕ್ಕ ವಯಸ್ಸಿನಲ್ಲಿಯೇ ನನ್ನನ್ನು ಆ ವಿಶ್ವಪತಿಗೆ ಕೊಟ್ಟು ಧಾರೆಯೆರೆದರು ದೀಕ್ಷೆಯ