ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಪೋಯಾತ್ರೆ
೧೯೭


ಮೂಲಕ. ಆದರೆ ನನ್ನ ತಂದೆತಾಯಿಗಳು ಲೋಕಸಹಜವಾದ ರೀತಿಯಲ್ಲಿ ಬೇರೆ ಮದುವೆಯನ್ನು ಮಾಡಿ ತಮ್ಮ ಕರ್ತವ್ಯವನ್ನು ಪೂರೈಸಲು ಹವಣಿಸುತ್ತಿದ್ದರು. ಅದರಿಂದ ಪಾರಾಗುವುದು ಹೇಗೆಂದು ನಾನು ಆಲೋಚಿಸುತ್ತಿದ್ದೆ. ಅಷ್ಟರಲ್ಲಿ ನೀವು ಬಲ್ಲಂತೆ ಒಂದು ಪರೀಕ್ಷೆಯ ಪ್ರಸಂಗ ನನ್ನ ಜೀವನದಲ್ಲಿ ಬಂದಿತು. ಕೌಶಿಕರಾಜ ನನ್ನ ರೂಪವನ್ನು ಕಂಡು ಮೋಹಿಸಿದ. ನನ್ನ ತಂದೆತಾಯಿಗಳು ನಿಷ್ಠಾವಂತರಾದ ಶಿವಭಕ್ತರು. ರಾಜನ ಬೆದರಿಕೆಗೆ ತಲೆಬಾಗುವಂತಿರಲಿಲ್ಲ. ಮದುವೆಯೇ ಬೇಡವೆನ್ನುತ್ತಿದ್ದ ನನ್ನ ಮನೋಧರ್ಮ ಸಾಧನೆಗೆ ಈ ಪ್ರಸಂಗ ಸಹಕಾರಿಯಾದ ಮಾರ್ಗವಾಗಬಹುದೆಂಬುದನ್ನು ಗುರುಲಿಂಗದೇವರು ನನಗೆ ಸೂಕ್ಷ್ಮವಾಗಿ ಸೂಚಿಸಿದರು. ನನ್ನ ಮದುವೆಯ ಸ್ವಾತಂತ್ರ್ಯವನ್ನು ನನ್ನ ಕೈಗೇ ತೆಗೆದುಕೊಂಡೆ. ಕೌಶಿಕನ ಅರಮನೆಗೆ ಹೋದೆ. ಇದನ್ನರಿಯದೆ ಜಗತ್ತು ನನ್ನ ತಂದೆತಾಯಿಗಳ ಮೇಲೆ ಹೇಡಿತನದ ಆಪಾದನೆಯನ್ನು ಹಾಕಿತು. ನಾನು ಕೌಶಿಕನನ್ನು ಮದುವೆಯಾದೆನೆಂದು ಭಾವಿಸಿತು. ಆದರೆ ಅವನನ್ನು ಮದುವೆಯಾಗುವ ಭಾವನೆ ನನ್ನ ಕನಸುಮನಸಿನಲ್ಲಿಯೂ ಇರಲಿಲ್ಲ. ಮದುವೆಯ ಬಂಧನದಿಂದ ಒಮ್ಮೆಗೇ ಮುಕ್ತಳಾಗುವುದಕ್ಕೆ ಇದೊಂದು ದೈವಕೃಪೆಯಂತೆ ಬಂದಿತು, ಅಷ್ಟೆ. ಅವನು ಮೂರು ಅಪರಾಧಗಳನ್ನು ಮಾಡಿದ. ಮೊದಲೇ ಅವನಿಗೆ ಎಚ್ಚರಿಸಿದಂತೆ ಅಲ್ಲಿಂದ ಹೊರಟೆ. ಸ್ತ್ರೀಯ ದೇಹಸೌಂದರ್ಯದ ವ್ಯರ್ಥವ್ಯಾಮೋಹವನ್ನು ಬಿಡಿಸಲು ದಿಗಂಬರಳಾಗಿ ಅರಮನೆಯನ್ನು ತ್ಯಜಿಸಿದೆ. ಸೌಂದರ್ಯದ ಹಂಗನ್ನು ಹರಿದೊಗೆದು ಬಂದೆ.

ಆವೇಶದಿಂದ ಮಾತುಗಳನ್ನು ಮುಗಿಸಿದಳು ಮಹಾದೇವಿ. ಶರಣರೆಲ್ಲಾ ತಲ್ಲೀನರಾಗಿ ಈ ಮಾತುಗಳನ್ನು ಆಲಿಸುತ್ತಿದ್ದರು. ಪ್ರಭು ಮುಗುಳು ನಗುತ್ತಾ ಕೇಳಿದ :

``ನಿನ್ನ ದೇಹದ ಮೇಲಿನ ಮೋಹ ನಿನಗಿನ್ನೂ ಬಿಟ್ಟಿಲ್ಲ. ನಿನ್ನ ಸೌಂದರ್ಯದ ಹೆಮ್ಮೆ ನಿನಗಿನ್ನೂ ಉಳಿದಿದೆಯಲ್ಲವೇ ?

``ಇಲ್ಲ... ನನ್ನ ಸೌಂದರ್ಯದ ಹೆಮ್ಮೆ ನನಗೆ ಎಳ್ಳಷ್ಟೂ ಉಳಿದಿಲ್ಲ. ಮಹಾದೇವಿ ಹೇಳಿದಳು:

ಕಾಯ ಕರ್ರನೆ ಕಂದಿದರೇನಯ್ಯ ?
ಕಾಯ ಮಿರ್ರನೆ ಮಿಂಚಿದಡೇನಯ್ಯ ?
ಅಂತರಂಗ ಶುದ್ಧವಾದ ಬಳಿಕ, ಚೆನ್ನಮಲ್ಲಿಕಾರ್ಜುನ
ಒಲಿದ ಅಂಗವು ಹೇಗಿದ್ದರೇನಯ್ಯ ?