ಪುಟ:Kadaliya Karpoora.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯

ಬೆಳೆಯುವ ಬೆಳಕು

ಓಂಕಾರನಿಗೆ ಗುರುಗಳ ನೆನಪಾಯಿತು. ತನ್ನ ವ್ಯವಹಾರವೋ, ವೇದಾಂತವೋ, ಸುಖವೋ, ದುಃಖವೋ, ಏನನ್ನೇ ಆಗಲಿ ಗುರುಗಳ ಮುಂದೆ ತೋಡಿಕೊಂಡು ಅವರ ಅಭಿಪ್ರಾಯವನ್ನು ಪಡೆದುದಲ್ಲದೆ ಓಂಕಾರನಿಗೆ ಸಮಾಧಾನವಾಗುತ್ತಿರಲಿಲ್ಲ. ಮಗುವಿಲ್ಲದ ಕೊರತೆಯಿಂದ ಕೊರಗುತ್ತಿದ್ದಾಗಲೂ ಮಾರ್ಗದರ್ಶನ ಮಾಡಿದವರು ಅವರು. ಈ ಸಂತೋಷ ಸಮಾಚಾರವನ್ನು ಅವರಿಗೆ ಮೊಟ್ಟಮೊದಲು ತಿಳಿಸಬೇಕಾದುದು ತನ್ನ ಕರ್ತವ್ಯವೆಂದೆನ್ನಿಸಿತು ಈ ಓಂಕಾರನಿಗೆ. ಅಲ್ಲದೆ ಗುರುವಿನ ಪಾದೋದಕವನ್ನು ತಂದು ಸಿಂಪಡಿಸಿ ತಾಯಿ ಮತ್ತು ಮಗುವನ್ನು ಅವರ ಅನುಗ್ರಹದಿಂದ ಪವಿತ್ರರನ್ನಾಗಿ ಮಾಡಬೇಕಾಗಿತ್ತು. ಅದಕ್ಕಾಗಿ ಮಠದ ಕಡೆ ಓಡಿದ ಓಂಕಾರ.

ಗುರುಗಳ ಕೋಣೆಯನ್ನು ಪ್ರವೇಶಿಸಿದ ಓಂಕಾರ ಆಶ್ಚರ್ಯಚಕಿತನಾಗಿ ನಿಂತ. ಗುರುಗಳು ನಿತ್ಯವೂ ಮಂಡಿಸುತ್ತಿದ್ದ ಚಿರಪರಿಚಿತವಾದ ಮಂಚದ ಮೇಲೆ ತೇಜಸ್ವಿಯಾದ ಜಂಗಮಮೂರ್ತಿಯೊಂದು ವಿರಾಜಿಸಿದೆ. ಗುರುಗಳು ಇನ್ನೊಂದು ಪೀಠದ ಮೇಲೆ ಕುಳಿತಿದ್ದಾರೆ. ತಕ್ಷಣವೇ ಏನು ಮಾಡಬೇಕೆಂಬುದೇ ತಿಳಿಯದಂತಾಯಿತು. ಇಬ್ಬರಿಗೂ ನಮಸ್ಕರಿಸಿದ. ಅಷ್ಟರಲ್ಲಿ ಗುರುಗಳು ಅರ್ಥಗರ್ಭಿತವಾದ ದೃಷ್ಟಿಯಿಂದ ಮಂಚದ ಮೇಲಿರುವ ಜಂಗಮಮೂರ್ತಿಯತ್ತ ನೋಡಿ ಹೇಳಿದರು:

“ಇವನೇ ನಾನು ಹೇಳಿದ ಓಂಕಾರಶೆಟ್ಟಿ” ಎಂದು ಅವನನ್ನು ಪರಿಚಯ ಮಾಡಿಕೊಟ್ಟರು ಮತ್ತು ಓಂಕಾರನನ್ನು ಕುರಿತು ಹೇಳಿದರು:

“ಈ ಮಹಾತ್ಮರ ದರ್ಶನವನ್ನು ಪಡೆದು ಧನ್ಯನಾಗು, ಓಂಕಾರ.” ಓಂಕಾರ ಇವರು ಯಾರೆಂಬುದನ್ನು ತಿಳಿದುಕೊಳ್ಳುವ ಕುತೂಹಲವನ್ನು ಸೂಚಿಸುವಂತೆ ಗುರುಗಳನ್ನೇ ನೋಡುತ್ತಿದ್ದ. ಅದನ್ನು ಅರಿತು, ಅವರೇ ಮುಂದು ವರಿಸಿದರು:

“ಇವರು ಮೆಟ್ಟಿದ ಧರೆ ಪಾವನ; ಇವರು ಮುಟ್ಟಿದ ಮನುಜ ಮಹಾದೇವ. ಜನತೆಯ ಆಧ್ಯಾತ್ಮಿಕ ಉದ್ಧಾರಕ್ಕಾಗಿಯೇ ಬದ್ಧಕಂಕಣರಾಗಿ ಹೊರಟಿರುವ ಮಹಾತ್ಮ ಮರುಳುಸಿದ್ದೇಶ್ವರರು ಇವರು.”

ಓಂಕಾರನ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಮರುಳುಸಿದ್ದರ ಮಹತ್ವವನ್ನೂ, ಅವರ ಕರ್ಮಯೋಗದ ರಹಸ್ಯವನ್ನೂ, ಗುರುಲಿಂಗದೇವರ ಬಾಯಿಂದಲೇ ಎಷ್ಟೋ ಸಾರಿ ಕೇಳಿದ್ದ ಓಂಕಾರ. ತನ್ನತನವನ್ನು ಇಲ್ಲಗೈದು ಜನತೆಯ ಉದ್ಧಾರಕ್ಕಾಗಿಯೇ ಅದನ್ನು ಸಂಪೂರ್ಣವಾಗಿ ನಿವೇದಿಸಿರುವ ಅಂತಹ