ಪುಟ:Kadaliya Karpoora.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೯

ತಪೋಯಾತ್ರೆ

ಅಡಗಿಸಿಕೊಂಡು ಕುಳಿತರು ಶರಣರು.

ಪ್ರಭುದೇವ ಮಹಾದೇವಿಯ ಮಾತಿನ ಮೊದಲನೆಯ ಭಾಗವನ್ನು ಹಿಡಿದು ಪ್ರಶ್ನಿಸಿದ :

``ಫಲ ಪಕ್ವವಾದ ಹೊರತು ಸಿಪ್ಪೆ ಒಪ್ಪಗೆಡದು ಎಂದೆಯಲ್ಲವೇ ? ಆದರೆ ನಾನು ಹೇಳುತ್ತೇನೆ ಕೇಳು : ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಗುತ್ತದೆ. ಇದನ್ನು ಗುಹೇಶ್ವರಲಿಂಗ ಹೇಗೆ ಒಪ್ಪಬಹುದು ?

ಈ ಚಮತ್ಕಾರದ ಪ್ರಶ್ನೆಯಿಂದ ಮಹಾದೇವಿ ತಬ್ಬಿಬ್ಬಾಗಲಿಲ್ಲ. ಕೇಳುತ್ತಿದ್ದ ಇತರರೆಲ್ಲಾ ಸಂತೋಷಗೊಳ್ಳುವಂತೆ ಹೇಳಿದಳು :

``ನೀವು ಹೇಳುವುದು ನಿಜ. ಹಣ್ಣಿನ ಸಿಪ್ಪೆಯನ್ನು ಸುಲಿದು ಇಟ್ಟರೆ ರಸ ಕೊಳಕಾಗುತ್ತದೆ. ಆದರೆ ಈ ಹಣ್ಣನ್ನು ಹಾಗೆಯೇ ಇಟ್ಟಿಲ್ಲ : ಚೆನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿಬಿಟ್ಟೆದ್ದೇನೆ. ಅರಿಷಡ್ವರ್ಗಗಳನ್ನು ಅಳಿದು, ನನ್ನ ದೇಹವನ್ನು ವ್ಯಾಪಿಸಿರುವ ಸಚ್ಚಿದಾನಂದಾತ್ಮಕವಾದ ರಸ ಅದು. ಸಿಪ್ಪೆ ಒಪ್ಪಗೆಟ್ಟರೂ ಅದು ಕೊಳೆಯಲಾರದು. ನನ್ನ ಒಳಹೊರಗೆಲ್ಲವನ್ನೂ ಅದು ವ್ಯಾಪಿಸಿ, ನನ್ನತನವನ್ನು ಇಲ್ಲಗೈದು ಎಂದೆಂದೂ ಅಳಿಯದ ಅಮರ ಪವಿತ್ರತೆಯನ್ನು ತಂದುಕೊಟ್ಟಿದೆ.

ಪ್ರಭು ಹಿಂದಕ್ಕೆ ಸರಿದು ನೆಟ್ಟಗೆ ಕುಳಿತುಕೊಳ್ಳುತ್ತಾ ಮತ್ತೆ ಹೇಳಿದ.

``ಈ ಬಾಯಬ್ರಹ್ಮದ ಬೆಡಗನ್ನು ನಾವು ಮೆಚ್ಚುವವರಲ್ಲ.

``ಇದು ಬಾಯಬ್ರಹ್ಮದ ಮಾತಲ್ಲ, ಪ್ರಭುವೇ...

``ಇನ್ನೇನು `ನನ್ನತನ'ವನ್ನು ಇಲ್ಲಗೈದಿದ್ದೇನೆ, ಎಂಬುದನ್ನು ನೀನು ಹೇಗೆ ಹೇಳಬಲ್ಲೆ :

ನಾ ಸತ್ತೆನೆಂದು ಹೆಣ ಕೂಗಿದುದುಂಟೇ?

ಬೈಚಿಟ್ಟ ಬಯಕೆ ಕರೆದುದುಂಟೇ?

ಹೆಪ್ಪಿಟ್ಟ ಹಾಲು ಸಿಹಿಯಪ್ಪುದೇ ?

ಈ ಮಾತು ಒಪ್ಪವಲ್ಲ ಗುಹೇಳ್ವರಲಿಂಗಕ್ಕೆ

ಇಲ್ಲಿ ಮಹಾದೇವಿ ಕ್ಷಣಕಾಲ ಯೋಚಿಸಿದಳು. ಮರುಕ್ಷಣದಲ್ಲಿಯೇ ಉತ್ತರ ಸಿದ್ಧವಾಗಿತ್ತು.

``ಸತ್ತ ಹೆಣ ಕೂಗಿದುದು ಉಂಟು. ಮರೆದು ಒರಗಿ ಕನಸು ಕಂಡು ಅದನ್ನು ಹೇಳುವಲ್ಲಿ ಸತ್ತ ಹೆಣ ಎದ್ದಂತೆ ಆಯಿತು. ಹೆಪ್ಪಿಟ್ಟ ಹಾಲು ಗಟ್ಟಿ ತುಪ್ಪವಾಗಿ ಸಿಹಿಯಾಗಿರುತ್ತದೆ. ಇದಕ್ಕೆ ತಪ್ಪು ಸಾಧಿಸಲೇಕೆ ? ಇದನ್ನು ನಿಶ್ಚಯಿಸಿ ನೋಡಿರಿ ಚೆನ್ನಮಲ್ಲಿಕಾರ್ಜುನನಲ್ಲಿ.