ಈ ಮಾತುಗಳನ್ನು ಕೇಳುತ್ತಾ ಪ್ರಭುದೇವನ ಮುಖ ಪ್ರಸನ್ನವಾಗತೊಡಗಿತು. ಮಹಾದೇವಿಯ ಮಾತು ಮುಗಿಯುತ್ತಿದ್ದಂತೆಯೇ ಪ್ರಭು ಬಸವಣ್ಣನ ಕಡೆಗೆ ತಿರುಗಿ :
``ನೋಡಿದೆಯಾ ಬಸವಣ್ಣ ! ಮಹಾದೇವಿಯ ಮಟ್ಟವನ್ನು ಒರೆಗೆ ಹಚ್ಚಿನೋಡಿ ಲೋಕಕ್ಕೆ ಪ್ರಕಟಮಾಡಬೇಕೆಂದೇ ನಾನು ಇಷ್ಟು ನಿಷ್ಠುರನಾದೆ ಎಂದು ಹೇಳುತ್ತಾ ಶೂನ್ಯಸಿಂಹಾಸನವನ್ನು ಬಿಟ್ಟೆದ್ದು ಮಹಾದೇವಿಯ ಬಳಿ ಬರತೊಡಗಿದ.
ಶರಣರೆಲ್ಲಾ ಮೇಲೆದ್ದು ನಿಂತು ಜಯಘೋಷ ಮಾಡಿದರು. ಅಲ್ಲಮಪ್ರಭು ಸಮೀಪಕ್ಕೆ ಬಂದು :
``ಮಹಾದೇವಿ, ನಿನ್ನ ನಿಲವಿಂಗೆ ನಮೋ ನಮಃ ಎಂದು ಹೇಳುವುದಕ್ಕೆ ಮೊದಲೇ ಮಹಾದೇವಿ ಅವನ ಪಾದಗಳನ್ನು ಹಿಡಿದು ವಂದಿಸಿದಳು. ಪ್ರಭು ಅವಳನ್ನು ಸಂತೈಸುತ್ತಾ ಹೇಳಿದ:
ಅಂಗ ಅಂಗನೆಯ ರೂಪಲ್ಲದೆ,
ಮನ, ವಸ್ತು ಭಾವದಲ್ಲಿ ಬೆಚ್ಚಂತಿಪ್ಪುದು
ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ, ಅಕ್ಕ !
ಗುಹೇಶ್ವರ ಲಿಂಗದಲ್ಲಿ ಉಭಯನಾಮವಳಿದೆ ಎನ್ನಕ್ಕಾ.
ಪ್ರಭುದೇವನಿಂದ ಈ ಮಾತುಗಳನ್ನು ಕೇಳಿ ಶರಣರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು. ಬಸವಣ್ಣನ ಕಣ್ಣುಗಳಿಂದ ಆನಂದಬಾಷ್ಪಗಳು ಸುರಿಯುತ್ತಿದ್ದವು.
``ಹೌದು ಪ್ರಭುವೇ, ಈಕೆ ನಮ್ಮೆಲ್ಲರ ಅಕ್ಕ. ನಮ್ಮೆಲ್ಲರಿಗೂ ಈಕೆ ಗುರುವಾಗಬಲ್ಲ ಯೋಗ್ಯತೆಯುಳ್ಳವಳು. ಅಕ್ಕಮಹಾದೇವಿ, ನಿನಗೆ ಶರಣು ಶರಣಾರ್ಥಿ. ನಮಸ್ಕರಿಸಿದ ಬಸವೇಶ್ವರ.
``ತಾವು ಹಾಗೆಲ್ಲಾ ಹೇಳಬಾರದು. ನಿಮ್ಮೆಲ್ಲರ ಕರುಣೆಯ ಶಿಶುನಾನು. ನಿಮ್ಮೆದುರಿನಲ್ಲಿ ಅತಿ ಚಿಕ್ಕವಳು. ವಿನೀತಳಾಗಿ ಹೇಳಿದಳು ಮಹಾದೇವಿ.
ಅದನ್ನು ಕೇಳಿ, ವಯಸ್ಸಿನಿಂದ ಅತಿ ಚಿಕ್ಕವನೇ ಆದ ಚನ್ನಬಸವಣ್ಣ ಪ್ರಾರಂಭಿಸಿದ :
``ಇರಬಹುದು, ವಯಸ್ಸು ಅತಿ ಚಿಕ್ಕದೇ ಇರಬಹುದು. ಆದರೂ ನೀನು ಎಲ್ಲರಿಗೂ ಅಕ್ಕನಾಗಬಲ್ಲವಳು ತಾಯಿ ಮಹಾದೇವಿಯಕ್ಕ. ಹಿರಿಯತನ ಕೇವಲ ವಯಸ್ಸಿನಿಂದ ಮಾತ್ರವೇ ಬರುವುದಿಲ್ಲ.
ಅಜ ಕಲ್ಪಕೋಟಿ ವರುಷದವರೆಲ್ಲರೂ ಹಿರಿಯರೇ ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ ?