ಪುಟ:Kadaliya Karpoora.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨

ಕದಳಿಯ ಕರ್ಪೂರ

ನಡುಮುರಿದು, ಗುಡುಗೂರಿ, ತಲೆನಡುಗಿ, ನೆರೆ ತೆರೆ ಹೆಚ್ಚಿ,

ಮತಿಗೆಟ್ಟು ಒಂದನಾಡಹೋಗಿ ಒಂಬತ್ತನಾಡುವ

ಅಜ್ಞಾನಿಗಳೆಲ್ಲರೂ ಹಿರಿಯರೇ ?

ಅನುವರಿದು, ಘನವ ಬೆರಸಿ, ಹಿರಿದು ಕಿರಿದೆಂಬ ಭೇದವ ಮರೆದು

ಕೂಡಲ ಚೆನ್ನಸಂಗಯ್ಯನಲ್ಲಿ ಬೆರಸಿ ಬೇರಿಲ್ಲದಿಪ್ಪ ಹಿರಿಯತನ,

ನಮ್ಮ ಮಹಾದೇವಿಯಕ್ಕಂಗಾಯಿತ್ತು.

ಇದುವರೆಗೂ ಸುಮ್ಮನೆ ಕುಳಿತು ಎಲ್ಲವನ್ನೂ ಸಾಕ್ಷೀಭೂತವಾಗಿ ನೋಡುತ್ತಿದ್ದ ಸಿದ್ಧರಾಮ, ಚನ್ನಬಸವಣ್ಣನ ಈ ವಚನದಿಂದ ಸ್ಫೂರ್ತಿಗೊಂಡು ಅಕ್ಕಮಹಾದೇವಿಯನ್ನು ಕುರಿತು ತನ್ನ ಮೆಚ್ಚುಗೆಯನ್ನು ಹೀಗೆ ವ್ಯಕ್ತಪಡಿಸಿದ :

ಅಹುದಹುದು ಮತ್ತೇನು ? ಮರಹಿಂಗೆ ಹಿರಿದು ಕಿರಿದುಂಟಲ್ಲದೇ

ಅರಿವಿಂಗೆ ಹಿರಿದು ಕಿರಿದುಂಟೇ ಹೇಳಯ್ಯ ?

ಸಾವಿಂಗೆ ಭಯವುಂಟಲ್ಲದೇ ಅಜಾತರಿಗೆ ಭಯವುಂಟೇ ಹೇಳಯ್ಯ ?

ಶರಣೆಂದು ಶುದ್ಧನಾದೆನು ಕಾಣಾ ಚನ್ನಬಸವಣ್ಣಾ.

ಹೀಗೆ ಒಬ್ಬೊಬ್ಬ ಶರಣರೂ ಒಂದೊಂದು ರೀತಿಯಲ್ಲಿ ಅವಳ ಮಹತ್ವವನ್ನು ಮನಮೆಚ್ಚಿ ಕೊಂಡಾಡಿದರು. ಬಸವಣ್ಣನ ಭಾವನೆಯಂತೂ ಮಾತಿಗೆ ಮೀರಿದುದಾಗಿತ್ತು. ಅಲ್ಲಮಪ್ರಭುವೂ ತನ್ನ ಸಹಜವಾದ ಗಾಂಭೀರ್ಯವನ್ನು ಕಿತ್ತೊಗೆದು ಅಕ್ಕಮಹಾದೇವಿಯನ್ನು ಉತ್ಸಾಹದಿಂದ ಹೊಗಳತೊಡಗಿದ.

ಇದನ್ನೆಲ್ಲಾ ಕೇಳಿ ಸಂಕೋಚದ ವಿನಯದಿಂದ ಮಹಾದೇವಿ ಬಾಗಿಹೋಗಿದ್ದಳು.

ಬಸವೇಶ್ವರ ಮೆಲ್ಲಗೆ ತನ್ನ ಪತ್ನಿ ಗಂಗಾಂಬಿಕೆಯತ್ತ ದೃಷ್ಟಿ ಹರಿಸಿದ. ಅದರ ಅರ್ಥ ಆಕೆಗೂ ಆಯಿತು. ಶರಣೆಯರ ಗುಂಪಿನಿಂದ ಗಂಗಾಂಬಿಕೆ ಮುಂದೆ ಬಂದು ``ಬಾ ತಾಯಿ, ಬಾ ಹೋಗೋಣ ಎಂದು ಮಾತೃವಾತ್ಸಲ್ಯದಿಂದ ಮಹಾದೇವಿಯ ತಲೆಯನ್ನು ನೇವರಿಸಿದಳು. ಅಷ್ಟರಲ್ಲಿ ನೀಲಾಂಬಿಕೆ, ಲಕ್ಕಮ್ಮ ಬಳಿಗೆ ಬಂದಿದ್ದರು. ಅವರ ಮಧ್ಯದಲ್ಲಿ ಮಹಾದೇವಿ ಶರಣೆಯರ ಗುಂಪಿನತ್ತ ನಡೆಯ ತೊಡಗಿದಳು. ಅವಳ ತಪೋಯಾತ್ರೆಯ ಪವಿತ್ರವಾಹಿನಿ, ಕಲ್ಯಾಣದ ಕಡಲನ್ನು ಸೇರಿದ ತೃಪ್ತಿಯಿಂದ ಗಂಭೀರವಾಗಿ ನಡೆಯುತ್ತಿತ್ತು.

ಶರಣರ ಅನುಭವಮಂಟಪ ಅಂದು ಅಮೂಲ್ಯವಾದ ರತ್ನಾಭರಣವನ್ನು ಪಡೆದು ಶ್ರೀಮಂತವಾಗಿತ್ತು. ಅದರ ದರ್ಶನದಿಂದ ಶರಣರ ಹೃದಯಗಳೆಲ್ಲಾ