ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಲ್ಯಾಣದಿಂದ ಕದಳಿ


ಅಂದು ಕಲ್ಯಾಣವನ್ನು ಪ್ರವೇಶಿಸಿದ ಮಹಾದೇವಿ ಇಂದು ಅಲ್ಲಿ ಆಧ್ಯಾತ್ಮದ ಅಮರ ಶ್ರೀಗಿರಿಯಾಗಿ ಬೆಳೆದುನಿಂತಿದ್ದಾಳೆ. ಆದರೂ ಈಕೆಗೆ ಇನ್ನೂ ಸಂಪೂರ್ಣ ಸಮಾಧಾನವಿಲ್ಲ. ಆ ಶ್ರೀಗಿರಿಯ ಗರ್ಭಗೃಹದಲ್ಲಿ ಚನ್ನಮಲ್ಲಿಕಾರ್ಜುನನ ಸಾಮರಸ್ಯದ ಸುಖ ಸಂಪೂರ್ಣವಾಗಿ ಲಭಿಸಿಲ್ಲವೆಂಬುದೇ ಅವಳಿಗೆ ಇಂದು ಉಳಿದಿರುವ ಅತೃಪ್ತಿ.

ಅದನ್ನೇ ಆಲೋಚಿಸುತ್ತಾ ಮಹಾದೇವಿ ಬಸವಣ್ಣನ ಮಹಾಮನೆಯ ಮಹಡಿಯ ಮುಂದಿನ ಬಿಸಿಲು ಮಾಳಿಗೆಯಲ್ಲಿ ಕುಳಿತಿದ್ದಾಳೆ. ಎತ್ತರವಾದ ಆ ಸ್ಥಳದಿಂದ ಕಲ್ಯಾಣ ಪಟ್ಟಣದ ಬಹುಭಾಗವೆಲ್ಲ ಕಣ್ಣಿಗೆ ಬೀಳುತ್ತದೆ.

ದೂರದಲ್ಲಿ ಬಿಜ್ಜಳನ ಅರಮನೆಯ ಗೋಪುರಗಳು ಬೆಳಗಿನ ಸೂರ್ಯನ ನೂರಾರು ದೇವಾಲಯಗಳ ಕಳಶಗಳು ಏರುತ್ತಿರುವ ಬೆಳಗಿನ ಸೂರ್ಯನ ಬಿಸಿಲಿನಲ್ಲಿ ಹೊಳೆಯುತ್ತಿವೆ. ಎಲ್ಲಕ್ಕಿಂತ ಎತ್ತರವಾಗಿ ನಿಂತಿರುವ ತ್ರಿಪುರಾಂತಕೇಶ್ವರನ ಹೊನ್ನಕಳಶವಂತೂ ಭವ್ಯವಾಗಿ ಕಾಣುತ್ತಿದೆ.

ಅದನ್ನೆಲ್ಲ ನೋಡುತ್ತಾ ಮಹಾದೇವಿಯ ದೃಷ್ಟಿ ಊರನ್ನೆಲ್ಲಾ ಸುತ್ತಿತು. ಅಲ್ಲಲ್ಲಿ ಚೆದುರಿದಂತೆ ಹರಡಿರುವ ಮರಗಳ ಮಡಿಲಿನಲ್ಲಿ ಊರು ಹಬ್ಬಿ ಹರಡಿತ್ತು. ಕಲಕಲರವದಿಂದ ತನ್ನ ನಿತ್ಯಜೀವನದಲ್ಲಿ ತೊಡಗಿತ್ತು.

ಬಸವಣ್ಣನ ಮಹಾಮನೆಯಲ್ಲಿಯೂ ಸಂಭ್ರಮದ ಕಲಕಲರವ ಎಂದಿನಂತೆ ನಡೆದೇ ಇತ್ತು. ನಿತ್ಯವೂ ಹೊಳೆಯಂತೆ ಹರಿದು ಬರುತ್ತಿರುವ ಅತಿಥಿಗಳ ದಾಸೋಹದ ದೃಶ್ಯವನ್ನು ಮಹಾದೇವಿ ತಾನು ಬಂದ ಹೊಸದರಲ್ಲಿ ಕಂಡು ಆಶ್ಚರ್ಯಮೂಕಳಾಗಿದ್ದಂತೆಯೇ ಬಸವೇಶ್ವರನ ಕಾರ್ಯಕ್ಷೇತ್ರದ ಅನುಭವ ಹೆಚ್ಚು ಹೆಚ್ಚು ಆಗತೊಡಗಿದಂತೆ ಮೆಚ್ಚಿ ಮಾರುಹೋಗಿದ್ದಳು.

ಅದನ್ನು ನೆನಸಿಕೊಳ್ಳುತ್ತಿದ್ದಂತೆಯೇ ಬಸವೇಶ್ವರನ ವ್ಯಕ್ತಿತ್ವದ ವಿರಾಟ್ ರೂಪ ಅವಳ ಮನಸ್ಸಿನ ಮುಂದೆ ಸುಳಿಯತೊಡಗಿತು.