ಪುಟ:Kadaliya Karpoora.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೦೫

``ಎಂತಹ ನಿರ್ಲಿಪ್ತ ನಿರಹಂಕಾರದ ಕರ್ಮಯೋಗ ಅಣ್ಣನದು : ಒಂದು ರಾಜ್ಯದ ಮಹಾಮಂತ್ರಿ ಒಂದು ಕಡೆ ! ಇನ್ನೊಂದು ಕಡೆ ಆಧ್ಯಾತ್ಮ ಚಕ್ರವರ್ತಿ ! ಭಕ್ತಿಭಂಡಾರಿ ! ಸುತ್ತಮುತ್ತಲಿನ ಸಮಾಜವನ್ನು ಮೇಲೆತ್ತಬಲ್ಲ ಮಹಾಪ್ರವೃತ್ತಿ ಶಕ್ತಿ. ಆಧ್ಯಾತ್ಮ ಪ್ರಪಂಚದಲ್ಲಿ ಆದರ್ಶಮಾತ್ರವಾಗಿದ್ದ ಯೋಗಸಮನ್ವಯ. ಇಂದು ಜೀವಂತವಾಗಿ ಮೂರ್ತಿವೆತ್ತಿದೆ ಅಣ್ಣನಲ್ಲಿ ! ಅವನು ಕಟ್ಟಿಕೊಂಡಿರುವ ಸಂಸಾರವೋ, ಅದು ಬೃಹತ್ ಸಂಸಾರ. ಧಾರ್ಮಿಕ ಕ್ರಾಂತಿ, ಸಮಾಜಸುಧಾರಣೆ, ಅಂಧಶ್ರದ್ಧೆಯ ವಿರುದ್ಧ ಪ್ರತಿಭಟನೆ, ಅಸ್ಪೃಶ್ಯತಾನಿವಾರಣೆ, ಸ್ತ್ರೀಯರ ಉದ್ಧಾರ ! ಒಂದೇ ಎರಡೇ....

ನೆನೆಯುತ್ತಾ ಹೋದಂತೆ ಬಹುಶಃ ಮುಂದಿನ ಜನಾಂಗ ಊಹಿಸಿಕೊಳ್ಳಲಾರೆದೆಂದೆನಿಸಿತು ಮಹಾದೇವಿಗೆ.

``ಅರಮನೆಯ ರಾಜಕೀಯ ಜಂಜಡದಲ್ಲಿ ಸಿಲುಕಿದ್ದರೂ ಅದನ್ನು ಮೀರಿ ನಿಂತಿದ್ದಾನೆ ಅಣ್ಣ. ರಾಜ್ಯದ ಜಟಿಲವಾದ ಸಮಸ್ಯೆಗಳನ್ನು ಅಲ್ಲಿ ಪರಿಹರಿಸುವಂತೆಯೇ, ಇಲ್ಲಿ ಸಾಧಕರ ಅಂತರಂಗದ ಸಮಸ್ಯೆಗಳಿಗೆ ಅನುಭಾವಪೂರ್ವಕವಾದ ಬೆಳಕನ್ನು ನೀಡುತ್ತಾನೆ. ಅವರ ಸಂದೇಹಗಳನ್ನು ಪರಿಹರಿಸುತ್ತಾನೆ....

ಮಹಾದೇವಿಯ ಮನಸ್ಸಿನಲ್ಲಿ ಈ ಭಾವನೆ ಸುಳಿಯುತ್ತಿದ್ದಂತೆಯೇ ಕೆಲವು ದಿನಗಳ ಹಿಂದೆ ಅನುಭವಮಂಟಪದಲ್ಲಿ ನಡೆದ ಒಂದು ಘಟನೆ ಅವಳ ಸ್ಮರಣೆಗೆ ಬಂದಿತು. ಅಣ್ಣನ ಒಂದೊಂದು ಮಾತೂ ಎಲ್ಲರ ಸಂದೇಹವನ್ನೂ ಪರಿಹರಿಸುವ ಬೆಳಕಿನಂತೆ ಬೆಳಗಿದ ಆ ಸನ್ನಿವೇಶವನ್ನು ಚಿತ್ರಿಸಿಕೊಳ್ಳತೊಡಗಿದಳು.

ಅಂದು ಅಂಬಿಗರ ಚೌಡಯ್ಯ ಅನುಭವಮಂಟಪದ ಚರ್ಚೆಗೆ ನಾಂದಿಯನ್ನು ಹಾಡಿದ್ದ-

ಅಲ್ಲಮಪ್ರಭು ಶೂನ್ಯಸಿಂಹಾಸದ ಮೇಲೆ ಮಂಡಿಸಿದ್ದಾನೆ. ಬಸವ, ಚನ್ನಬಸವ, ಸಿದ್ಧರಾಮರು, ಗದ್ದುಗೆಯ ಪಕ್ಕದಲ್ಲಿ ಕುಳಿತಿದ್ದಾರೆ. ಶರಣೆಯರ ಗುಂಪಿನಲ್ಲಿ ಮುಂದಿನ ಸಾಲಿನಲ್ಲಿಯೇ ತಾನು ಕುಳಿತಿದ್ದಾಳೆ ಮಹಾದೇವಿ. ಅಲ್ಲಮಪ್ರಭು ಸುತ್ತಲೂ ಒಮ್ಮೆ ದೃಷ್ಟಿಯನ್ನು ಹರಿಸಿದ. ಶೂನ್ಯಪೀಠಕ್ಕೆ ಸ್ವಲ್ಪದೂರದಲ್ಲಿ ಕಾಲುಮಣೆಯ ಮೇಲೆ ಓಲೆಗರಿಗಳನ್ನಿಟ್ಟುಕೊಂಡು ಭಂಡಾರಿ ಶಾಂತರಸ, ಕಾರ್ಯಕ್ರಮಗಳ ಮುಖ್ಯ ಚರ್ಚೆಗಳನ್ನು ಬರೆದುಕೊಳ್ಳಲು ಸಿದ್ಧನಾಗಿದ್ದಾನೆ. ಅತ್ತ ತಿರುಗಿ ಅಲ್ಲಮಪ್ರಭು ಹೇಳಿದ :