ಪುಟ:Kadaliya Karpoora.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬

ಕದಳಿಯ ಕರ್ಪೂರ

`ಶಾಂತರಸರೇ, ನೆನ್ನೆಯ ದಿನದ ವಚನಗಳನ್ನೆಲ್ಲಾ ಬರೆದುಕೊಂಡಿದ್ದೀರಿ ಅಲ್ಲವೇ ? ಅಥವಾ ಯಾವುದಾದರೂ ವಚನ ಪೂರ್ಣವಾಗಿಲ್ಲದಿದ್ದರೆ ಇಂದು ಅದನ್ನು ಹೇಳಿಬಿಡಿ ; ಪೂರ್ಣಗೊಳಿಸಿ ಮುಂದೆ ಸಾಗೋಣ.

``ಸ್ವಲ್ಪ ವಚನಗಳನ್ನೂ ಬರೆದುಕೊಂಡಿದ್ದೇನೆ, ಪ್ರಭುವೇ. ಒಂದು ವಚನ ಮಾತ್ರ ಸ್ವಲ್ಪ ತೊಡಕನ್ನು ತಂದಿತ್ತು. ಅದು ಬಸವಣ್ಣನವರೇ ಹೇಳಿದ ವಚನ.ಇಂದು ಅವರೊಡನೆ ಚರ್ಚಿಸಿ ಅದನ್ನು ಸರಿಪಡಿಸಿದ್ದೇನೆ ಹೇಳಿದ ಶಾಂತರಸ.

``ಸರಿ ಹಾಗಾದರೆ, ಇಂದಿನ ಕಾರ್ಯಕ್ರಮಕ್ಕೆ ಪ್ರವೇಶ ಮಾಡೋಣ ಎಂದು ಶರಣರನ್ನು ಉದ್ದೇಶಿಸಿ ಕೇಳಿದ : ``ಇಂದು ಚರ್ಚೆಯನ್ನು ಯಾರು ಪ್ರಾರಂಭಿಸುತ್ತೀರಿ? ಯಾವ ಸಂದೇಹವನ್ನು ಮುಂದಿಡುತ್ತೀರಿ ?

ಕ್ಷಣಕಾಲ ಸಭೆಯಲ್ಲಿ ಮೌನವಾವರಿಸಿತು. ಶರಣರು ಒಬ್ಬರನ್ನೊಬ್ಬರು ನೋಡತೊಡಗಿದರು. ಅಷ್ಟರಲ್ಲಿ ಮೇಲೆದ್ದ ಚೌಡಯ್ಯ. ಎಲ್ಲರ ಕಣ್ಣುಗಳು ಕುತೂಹಲಗೊಂಡವು.

ಚೌಡಯ್ಯ ಮೇಲೆದ್ದು ಪ್ರಭುವಿಗೆ ವಿನಯದಿಂದಾಗಿ ಬಾಗಿ ನಮಸ್ಕರಿಸಿದ. ಸಭೆಗೆಲ್ಲಾ ಕೈಮುಗಿದು ಹೇಳಿದ : ``ನನ್ನದೊಂದು ಮಾತಿದೆ, ಪ್ರಭುವೇ."

``ಹೇಳು ಚೌಡಯ್ಯ, ಹೇಳು. ಮುಗುಳುನಗೆ ಸುಳಿಯಿತು ಪ್ರಭುದೇವನ ಮುಖದ ಮೇಲೆ.

ಪ್ರಾರಂಭಿಸಿದ ಚೌಡಯ್ಯ : ``ಈಗೊಂದೆರಡು ದಿನಗಳ ಹಿಂದೆ ನಾನು ನನ್ನ ಕಾಯಕದಲ್ಲಿ ನಿರತನಾದಾಗ ಒಂದು ಘಟನೆ ನಡೆಯಿತು. ದೋಣಿಯನ್ನು ದಡಕ್ಕೆ ತಂದು ನಿಲ್ಲಿಸುತ್ತಿದ್ದೆ. ದೋಣಿಯ ಹುಟ್ಟಿನಿಂದ ಸಿಡಿದ ನೀರು ಅಲ್ಲಿ ಕುಳಿತಿದ್ದ ಉಚ್ಚವರ್ಣದವರೊಬ್ಬರಿಗೆ ಸಿಡಿಯಿತು. ಅಬ್ಬಾ ! ಅವರ ಕೋಪಕ್ಕೆ ಪಾರವೇ ಇಲ್ಲದಂತಾಯಿತು. ನಾಲಗೆಯನ್ನು ಹರಿಯಬಿಟ್ಟರು. ಧರ್ಮ ಮುಳುಗಿತೆಂದರು; ಕಾಲ ಕೆಟ್ಟಿತೆಂದರು. `ಶೂದ್ರರೆಲ್ಲ ಭಕ್ತರಾಗುವ ಧರ್ಮಭ್ರಷ್ಟ ಕಾಲ ಬಂದುದಕ್ಕೆ ಶಪಿಸಿದರು. ನಾನೆಲ್ಲವನ್ನೂ ಸಹಿಸಿಕೊಂಡೇ ಇದ್ದೆ. ಆದರೆ ಇದಕ್ಕೆಲ್ಲಾ ಕಾರಣವೆಂದು ಹೇಳುತ್ತಾ ಅಣ್ಣನವರ ಪವಿತ್ರನಾಮವನ್ನು ತಿರಸ್ಕಾರದಿಂದ ಬಳಸಿಕೊಂಡಾಗ ತಡೆಯಲಾರದೇ ಹೋದೆ. ನನಗೂ ನಾಲಿಗೆಯಿದೆ ಎಂಬುದನ್ನು ಚೆನ್ನಾಗಿಯೇ ತೋರಿಸಿದೆ. ಉತ್ತಮರೆನಿಸಿಕೊಳ್ಳುವವರು ಮಾಡುವ ಅನ್ಯಾಯಗಳನ್ನೂ ಅಧರ್ಮಗಳನ್ನೂ, ಕುಟಿಲ ಕುಹಕ ವಂಚನೆ ಮೋಸಗಳನ್ನು ಸಾಕ್ಷಿಯನ್ನಿಟ್ಟು ತೋರಿಸಿ ಹೇಳಿದೆ. ಮತ್ತು ಹೇಳಿದೆ.